ಬರ ಪೀಡಿತ ತಾಲೂಕೆಂದು ಘೊಷಿಸಲು ಒತ್ತಾಯ

29byd3
Published on

ಬ್ಯಾಡಗಿ: ಬರ ಪೀಡಿತ ಪ್ರದೇಶಕ್ಕೆ ತಾಲೂಕನ್ನು ಸೇರಿಸುವುದು, ಏಳು ತಾಸು ತ್ರೀ ಫೇಸ್ ವಿದ್ಯುತ್ ಪೂರೈಕೆ, ಬೆಳೆ ಪರಿಹಾರ ನೀಡುವುದು, ಬೆಳೆ ಮೆ ಮುಂಗಡ ಹಣ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ತಹಸೀಲ್ದಾರ್ ಕಾರ್ಯಾಲಯ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ರೈತಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಮಳೆ ಬೆಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಆದರೆ, ಸರ್ಕಾರ ರೈತಪರ ನಿಲುವುಗಳನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದೆ. ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸರ್ಕಾರ ತಕ್ಷಣ ಕಂದಾಯ ಹಾಗೂ ಕೃಷಿ, ತೋಟಗಾರಿಕೆ ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡು ಬರಗಾಲ ಪ್ರದೇಶವೆಂದು ಘೊಷಣೆ ಮಾಡಬೇಕು ಎಂದು ಒತ್ತಾಯಿಸಿದರು.

ತಾಲೂಕಾಧ್ಯಕ್ಷ ರುದ್ರಗೌಡ ಕಾಡನಗೌಡ್ರ ಮಾತನಾಡಿ, ಸುಮಾರು 400 ಕೋಟಿ ರೂ. ಖರ್ಚು ಮಾಡಿ ಆಣೂರು, ಬುಡಪನಹಳ್ಳಿ ಕೆರೆ ತುಂಬಿಸುವ ಯೋಜನೆ ಜಾರಿಗೊಳಿಸಿದರೂ ಇಂಜಿನಿಯರಗಳ ಅವೈಜ್ಞಾನಿಕ ನಿರ್ಧಾರದಿಂದ ಸಮರ್ಪಕವಾಗಿ ಕೆರೆಗಳಿಗೆ ನೀರು ಬಾರದಂತಾಗಿದೆ. ನೆಪಮಾತ್ರಕ್ಕೆ ಒಂದೆರಡು ದಿನ ನೀರು ಬಿಟ್ಟು ಪುನ: ಬಂದ್ ಮಾಡಲಾಗಿದೆ. ಹೊಳೆಯಲ್ಲಿ ನೀರಿಲ್ಲವೆಂದು ಸುಳ್ಳು ಹೇಳುವ ಅಧಿಕಾರಿಗಳು, ಇಂಜಿನಿಯರ್​ರು ಹಾಗೂ ನಿರ್ವಹಣೆ ಸಿಬ್ಬಂದಿ ರೈತರಿಗೆ ಮೋಸವೆಸಗುತ್ತಿದ್ದಾರೆ. ದೊಡ್ಡ ಮೊತ್ತದಲ್ಲಿ ತಾಲೂಕಿನ ನೀರಾವರಿಗೆ ಹಣ ಬಂದರೂ ಹೊಳೆಯಲ್ಲಿ ಹುಣಸೆಹಣ್ಣು ಸುರಿದಂತಾಗಿದೆ. ಗುಡ್ಡದಮಲ್ಲಾಪುರ ಏತ ನೀರಾವರಿ ಯೋಜನೆ ಸ್ಥಗಿತಗೊಂಡಿದ್ದು, ಸುಮಾರು 35 ಗ್ರಾಮಗಳ ರೈತರಿಗೆ ಅನ್ಯಾಯವಾಗಿದೆ. 110 ಕೋಟಿ ರೂ. ಖರ್ಚು ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ತಹಸೀಲ್ದಾರ್ ಎಸ್.ಎ. ಪ್ರಸಾದ ಮನವಿ ಸ್ವೀಕರಿಸಿ, ಸರ್ಕಾರಕ್ಕೆ ರೈತರ ಸಮಸ್ಯೆಯನ್ನು ಗಮನಕ್ಕೆ ತಂದು ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ, ಪ್ರತಿಭಟನೆ ಕೈಬಿಡಲಾಯಿತು.

ರೈತಮುಖಂಡರಾದ ಕಿರಣಕುಮಾರ ಗಡಿಗೋಳ, ಮಲ್ಲೇಶ ಡಂಬಳ, ಫಕೀರಪ್ಪ ಅಜಗೊಂಡರ, ಮಂಜು ತೋಟದ, ಮೌನೇಶ ಕಮ್ಮಾರ, ಬಸವರಾಜ ಕುಮ್ಮೂರ, ಕೆ.ವಿ. ದೊಡ್ಡಗೌಡ್ರ, ಚನಬಸಪ್ಪ ಕೊಡಿಹಳ್ಳಿ, ಶಂಕರ ಮರಗಾಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net