ಶಿಗ್ಗಾಂವಿ ತಹಸೀಲ್ದಾರ್ ವರ್ಗಾವಣೆ ರದ್ದುಪಡಿಸಲು ಒತ್ತಾಯ

Forced to cancel transfer of Shiggamvi Tahsildar
Published on

ಶಿಗ್ಗಾಂವಿ: ತಾಲೂಕಿನ ಸಾರ್ವಜನಿಕರ ಸಮಸ್ಯೆಗಳಿಗೆ ಸದಾ ಸ್ಪಂದಿಸಿ, ಪ್ರಾಮಾಣಿಕ ಕೆಲಸ ಮಾಡುತ್ತಿದ್ದ ತಹಸೀಲ್ದಾರ್ ಸಂತೋಷ ಹಿರೇಮಠ ಅವರನ್ನು ದಿಢೀರ್ ವರ್ಗಾವಣೆ ಮಾಡಿರುವುದನ್ನು ಸರ್ಕಾರ ಕೂಡಲೇ ರದ್ದು ಮಾಡಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಯ ಮುಖಂಡರು ಪಟ್ಟಣದ ತಹಸೀಲ್ದಾರ್ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಶಿಗ್ಗಾಂವಿ ತಹಸೀಲ್ದಾರ್ ಆಗಿ ಕಳೆದ ಒಂದೂವರೆ ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದ ಸಂತೋಷ ಹಿರೇಮಠ ಅವರ ಕೆಲಸದಿಂದ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಲಭ್ಯವಾಗುತ್ತಿದೆ. ಯಾವುದೇ ಕಾರಣ ಇಲ್ಲದೆ ಪ್ರಾಮಾಣಿಕ ಅಧಿಕಾರಿ ವರ್ಗಾವಣೆ ಖಂಡನೀಯವಾಗಿದೆ. ತಾಲೂಕಿನಲ್ಲಿರುವ ಜ್ವಲಂತ ಸಮಸ್ಯೆಗಳ ಕುರಿತು ಸಂತೋಷ ಹಿರೇಮಠ ಅವರಿಗೆ ಸಂಪೂರ್ಣ ಮಾಹಿತಿ ಇದೆ. ಹೊಸದಾಗಿ ಬರುವ ತಹಸೀಲ್ದಾರರಿಗೆ ತಾಲೂಕಿನ ವಿಷಯ ತಿಳಿಯಬೇಕೆಂದರೆ 3 ರಿಂದ 4 ತಿಂಗಳು ಬೇಕಾಗುತ್ತೆ. ಹೀಗಿರುವಾಗ ಸಂತೋಷ ಹಿರೇಮಠ ಅವರನ್ನು ರಾಜಕೀಯ ಷಡ್ಯಂತ್ರದಿಂದ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದರು.

ದಶಕದಿಂದ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದ ಕಂದಾಯ ಇಲಾಖೆಯನ್ನು ಪಾರದರ್ಶಕ ಆಡಳಿತಕ್ಕೆ ಅಣಿಗೊಳಿಸಿದ್ದ ತಹಸೀಲ್ದಾರ್ ಅವರ ವರ್ಗಾವಣೆಯನ್ನು ಸರ್ಕಾರ ರದ್ದುಪಡಿಸದಿದ್ದರೆ ಉಪ ಚುನಾವಣೆ ಮತದಾನ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ ಪ್ರತಿಭಟನಾಕಾರರು, ಕ್ರಿಯಾಶೀಲ ತಹಸೀಲ್ದಾರರ ಕರ್ತವ್ಯ ಇಲ್ಲಿ ಅವಶ್ಯವಿದೆ. ಈ ನಿಟ್ಟಿನಲ್ಲಿ ಸಂತೋಷ ಹಿರೇಮಠ ಅವರನ್ನು ಮುಂದುವರಿಸಬೇಕು ಎಂದು ಮನವಿ ಮೂಲಕ ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಸವಣೂರ ಉಪ ವಿಭಾಗಾಧಿಕಾರಿ ಮೊಹ್ಮದ ಖಿಜರ್, ತಮ್ಮ ಬೇಡಿಕೆ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ರವಾನಿಸುವುದಾಗಿ ಭರವಸೆ ನೀಡಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಆನಂದ ಕೆಳಗಿಮನಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷೆ ಸಂತೋಷಿ ಮಾತಾ, ಕನ್ನಡ ಜಾಗೃತ ವೇದಿಕೆ ಅಧ್ಯಕ್ಷೆ ನೀಲಮ್ಮ ವನಹಳ್ಳಿ, ರೈತ ಮುಖಂಡರಾದ ಶಂಕರಗೌಡ್ರ ಪಾಟೀಲ, ದೇವರಾಜ ದೊಡ್ಡಮನಿ, ಗಿರೀಶ ಪಾಟೀಲ, ಮಂಜುನಾಥ ಕಂಕಣವಾಡ, ಶಿವಕುಮಾರಯ್ಯ ಜೆಡಿಮಠ, ಈರಣ್ಣ ಸಮಗೊಂಡ, ಮಂಜುನಾಥ ಬೆಂಡಿಗೇರಿ, ಮುತ್ತಣ್ಣ ಗುಡಗೇರಿ, ಪಂಚಯ್ಯ ಹಿರೇಮಠ, ಮೌಲಾಲಿ ಸವಣೂರ, ಮಂಜುನಾಥ ಬ್ಯಾಳಪ್ಪನವರ, ರಾಮನಗೌಡ್ರ ಗಾಳಿಗೌಡ್ರ, ಬಸವರಾಜ ಗಂಜೀಗಟ್ಟಿ, ಮೌಲಸಾಬ ಜೇಕನಕಟ್ಟಿ, ದಯಾನಂದ ಮೆಣಿಸಿನಕಾಯಿ, ಅಶೋಕ ಮಡ್ಲಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net