

ಮಹಾಲಿಂಗಪುರ: ಅರ್ಧಕ್ಕೆ ನಿಂತ ಬಿಸಿಯೂಟ ಕೊಠಡಿ ಮತ್ತು ಕಾಂಪೌಂಡ್ ಕಾಮಗಾರಿ ತಕ್ಷಣ ಪೂರ್ಣಗೊಳಿಸದಿದ್ದರೆ 1040 ಮಕ್ಕಳೊಂದಿಗೆ ಪುರಸಭೆ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಬಸವಾನಂದ ಶಾಲೆ ಮುಖ್ಯಶಿಕ್ಷಕ ಎಸ್.ಕೆ. ಗಿಂಡೆ ಹೇಳಿದರು.
ಶಾಲೆ ಆಡಳಿತ ಮಂಡಳಿ ಸದಸ್ಯರು ಮತ್ತು ಸಹ ಶಿಕ್ಷಕರೊಂದಿಗೆ ಪುರಸಭೆ ವ್ಯವಸ್ಥಾಪಕ ಎಸ್.ಎನ್. ಪಾಟೀಲ, ಕಿರಿಯ ಅಭಿಯಂತರ ಎಸ್.ಎಂ. ಕಲಬುರ್ಗಿ ಅವರಿಗೆ ಬುಧವಾರ ಮನವಿ ಸಲ್ಲಿಸಿ ಮಾತನಾಡಿದರು.
ಪಟ್ಟಣದ ಮಹಾಲಿಂಗೇಶ್ವರ ದೇವಸ್ಥಾನ ಹಿಂಭಾಗದಲ್ಲಿ 2020 ೆಬ್ರವರಿಯಲ್ಲಿ ಯಾವುದೇ ನೋಟಿಸ್ ನೀಡದೆ ಪುರಸಭೆ ಅಧಿಕಾರಿಗಳು, ಸದಸ್ಯರು ರಸ್ತೆ ವಿಸ್ತರಣೆಗೆ ಶಾಲೆಯ ಎರಡು ಅಂತಸ್ತಿನ ಅಕ್ಷರ ದಾಸೋಹ(ಅಡುಗೆ) ಕೊಠಡಿ ಮತ್ತು ಕಾಂಪೌಂಡ್‌ನ್ನು ಮತ್ತೆ ನಿರ್ಮಿಸಿ ಕೊಡುವ ಷರತ್ತಿನೊಂದಿಗೆ ತೆರವುಗೊಳಿಸಿದ್ದರು. ಆದರೆ, ನಾಲ್ಕು ವರ್ಷಗಳಾದರೂ ಬಿಸಿಯೂಟ ಕೊಠಡಿ ಮತ್ತು ಕಾಂಪೌಂಡ್ ನಿರ್ಮಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸವಾನಂದ ಶಿಕ್ಷಣ ಸಂಸ್ಥೆಯ ಡಾ.ಬಿ.ಡಿ. ಸೋರಗಾಂವಿ ಮಾತನಾಡಿ, 2022ರಲ್ಲಿ ಶಾಸಕರ ಅನುದಾನದಲ್ಲಿ ಬಿಸಿಯೂಟ ಕೊಠಡಿಯನ್ನು ಪ್ರಾರಂಭಿಸಿ ಅರ್ಧಕ್ಕೆ ನಿಲ್ಲಿಸಿದ್ದಾರೆ. ಇದರಿಂದಾಗಿ ಸರ್ಕಾರದ ಬಿಸಿಯೂಟ ಮತ್ತು ಕ್ಷೀರ ಭಾಗ್ಯ ಯೋಜನೆಗಳ ಅನುಷ್ಠಾನಕ್ಕೆ ತೊಂದರೆಯಾಗುತ್ತಿದೆ. ಕಾಂಪೌಂಡ್ ಇಲ್ಲದ್ದರಿಂದ ರಾತ್ರಿ ಶಾಲೆ ಆವರಣದಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿವೆ. ಪುರಸಭೆ ಹಿಂದಿನ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಅವಧಿಯಲ್ಲಿ ನಗರೋತ್ಥಾನ ಕಾಮಗಾರಿಯಲ್ಲಿ ಕಟ್ಟಡ ನಿರ್ಮಿಸಲು ಡಿಸಿ ಆದೇಶ ಪತ್ರ ನೀಡಿದ್ದಾರೆ, ಹೊರತು ಈವರೆಗೆ ಕಾಮಗಾರಿ ಪ್ರಗತಿ ಇಲ್ಲ. ಕೂಡಲೇ 21 ದಿನದೊಳಗೆ ಸದರಿ ಕಾಮಗಾರಿ ಆರಂಭಿಸದಿದ್ದರೆ ಮಕ್ಕಳೊಂದಿಗೆ ಪುರಸಭೆ ಆವರಣದಲ್ಲಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಬಸವಾನಂದ ಟ್ರಸ್ಟ್ ಕಮಿಟಿ ಸದಸ್ಯರಾದ ಪ್ರಭು ಬೆಳಗಲಿ, ಶಿಕ್ಷಕರಾದ ವೈ.ಎ. ಮಗದುಮ್, ಸಿ.ವಿ. ಹುಣಶ್ಯಾಳ, ಶ್ರೀನಿವಾಸ ಕಾಂಬಳೆಕರ, ಎಸ್.ಎಂ. ಮುಗಖೋಡ ಇತರರಿದ್ದರು.
ಚರಂಡಿಯಂತಾದ ರಸ್ತೆ: ಈವರೆಗೂ ಶಾಲೆ ಮುಂದೆ ರಸ್ತೆ ಕಾಮಗಾರಿಯೂ ನಡೆದಿಲ್ಲ. ಮಳೆ ನೀರಿನಿಂದ ರಸ್ತೆಯಲ್ಲಿ ತಗ್ಗು ದಿನ್ನೆಗಳು ಬಿದ್ದಿವೆ. ವಿದ್ಯಾರ್ಥಿಗಳಿಗೆ ಶಾಲೆಗೆ ಆಗಮಿಸಲು ತೊಂದರೆ ಆಗುತ್ತಿದೆ. ಕೂಡಲೇ ತಾತ್ಕಾಲಿಕವಾಗಿಯಾದರೂ ದುರಸ್ತಿಗೊಳಿಸಬೇಕೆಂದು ಶಿಕ್ಷಕರು ಒತ್ತಾಯಿಸಿದ್ದಾರೆ.