25 ವರ್ಷಗಳಿಂದ ಎಸ್ಟೇಟ್‌ನಲ್ಲಿ ಜೀತಕ್ಕಿದ್ದ ಮೂವರಿಗೆ ಮುಕ್ತಿ

15-klr-001
Published on

ಕೋಲಾರ: ಸುಮಾರು 25 ವರ್ಷಗಳಿಂದ ಎಸ್ಟೇಟ್‌ವೊಂದರಲ್ಲಿ ಜೀತಕ್ಕಿದ್ದ ಕುಟುಂಬವೊಂದನ್ನು ಜೀವಿಕ ಸಂಘಟನೆ ಪತ್ತೆ ಮಾಡಿ ಮುಕ್ತಿ ದೊರಕಿಸಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.

ಬಂಗಾರಪೇಟೆ ತಾಲೂಕಿನ ಹುದುಕುಳ ಗ್ರಾಮದ ಎಸ್ಟೇಟ್‌ನಲ್ಲಿ ತಾಲೂಕಿನ ಬೂದಿಕೋಟೆ ಹೋಬಳಿಗೆ ಸೇರಿದ ದೊಡ್ಡಪನ್ನಾಂಡಹಳ್ಳಿ ಕೃಷ್ಣಪ್ಪ(65), ಪತ್ನಿ ರುಕ್ಕಮ್ಮ (55) ಹಾಗೂ ಮಗಳು ಸಂಜನಾ (13) ಹುದುಕುಳ ಗ್ರಾಮದ ಶಿವಾನಂದ ಎಂಬುವವರ ಎಸ್ಟೇಟ್‌ನಲ್ಲಿ ಜೀತ ಮಾಡುತ್ತಿದ್ದರು.

ವಿಷಯ ತಿಳಿದ ಬಂಗಾರಪೇಟೆ ಜೀವಿಕ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಸತ್ಯಭಾಮ ಅವರ ಗಮನಕ್ಕೆ ತಂದಿದ್ದಾರೆ. ಮಾಹಿತಿ ಖಚಿತಪಡಿಸಿಕೊಳ್ಳಲು ಜಿಪಂ ಉಪಕಾರ್ಯದರ್ಶಿ ಸಂಜೀವಪ್ಪ ಅವರಿಗೆ ಸೂಚಿಸಲಾಗಿತ್ತು. ಜಿಲ್ಲಾಧಿಕಾರಿ ಆದೇಶದಂತೆ ಮಂಗಳವಾರ ಸಂಜೆ ಸಂಜೀವಪ್ಪ ಅವರು ಅಧಿಕಾರಿಗಳ ತಂಡದೊಂದಿಗೆ ಎಸ್ಟೇಟ್ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ಜೀತಕ್ಕೆ ಇರುವುದು ಖಚಿತವಾಗಿ ತಕ್ಷಣ ಮೂವರನ್ನು ಬಿಡುಗಡೆಗೊಳಿಸಿದ್ದಾರೆ.

ಜೀತದಾಳುಗಳ ಮಗಳು ಸಂಜನಾ ಪ್ರಸ್ತುತ 9ನೇ ತರಗತಿ ಓದುತ್ತಿದ್ದು, ತಮ್ಮನ್ನು ಊರಿಗೆ ಕಳುಹಿಸಿದರೆ ಇನ್ನೂ ಹೆಚ್ಚು ಓದಲು ಸಹಾಯವಾಗುತ್ತದೆ ಎಂದಾಗ, ಅಲ್ಲಿದ್ದ ಅಧಿಕಾರಿಗಳು, ಓದಿಗೆ ಸರ್ಕಾರ ಸಹಾಯ ಮಾಡುವ ಹಾಗೂ ಊರಿಗೆ ಕಳುಹಿಸುವ ಭರವಸೆ ನೀಡಿದರು.

ಬಂಗಾರಪೇಟೆ ತಾಪಂ ಇಒ ಎನ್.ವೆಂಕಟೇಶಪ್ಪ, ಚಿಕ್ಕಅಂಕಂಡಹಳ್ಳಿ ಪಿಡಿಒ ಚಿತ್ರಾವತಿ, ಕಸಬಾ ಕಂದಾಯ ವೃತ್ತದ ರಾಜಸ್ವ ನಿರೀಕ್ಷಕ ಅಜಯ್, ಜೀವಿಕ ಒಕ್ಕೂಟದ ಅಧ್ಯಕ್ಷ ಹಿರೇಕರಪನಹಳ್ಳಿ ವಿ.ಯಲ್ಲಪ್ಪ, ಜೀವಿಕ ಗ್ರಾವ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಡಾ.ರಾಮಚಂದ್ರಪ್ಪ, ಜೀವಿಕ ಒಕ್ಕೂಟದ ತಾಲೂಕು ಅಧ್ಯಕ್ಷ ಕಳ್ಳಿಕುಪ್ಪ ತಿಪ್ಪಣ್ಣ, ಒಕ್ಕೂಟದ ಮುಖಂಡ ಆನಂದ್ ಇನ್ನಿತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net