

ಮೈಸೂರು: ಮಣ್ಣನ್ನು ನಿರ್ಲಕ್ಷ್ಯ ಮಾಡಿದರೆ ಊಹಿಸಿಕೊಳ್ಳಲು ಸಾಧ್ಯವಾಗದಷ್ಟು ನಷ್ಟ ಅನುಭವಿಸುತ್ತೇವೆ. ಆದ್ದರಿಂದ ಮಣ್ಣು ಸಂರಕ್ಷಣೆ ಕಾಯ್ದೆ ಜಾರಿಗೊಳಿಸಬೇಕು ಎಂದು ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಸಿ.ಚಂದನ್‌ಗೌಡ ಸರ್ಕಾರಕ್ಕೆ ಮನವಿ ಮಾಡಿದರು.
ಮೈಸೂರು ತಾಲೂಕಿನ ರಾಯನಹುಂಡಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ರೈತ ಕಲ್ಯಾಣ ಸಂಘದ ಉದ್ಘಾಟನೆ, ನಾಮಫಲಕ ಅನಾವರಣ ಹಾಗೂ ಮಣ್ಣಿಗೆ ಮರುಜೀವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭೂಮಿ ಮೇಲೆ ಬೆಲೆ ಕಟ್ಟಲಾಗದ ಸಂಪತ್ತು ಎಂದರೆ ಮಣ್ಣು. ಆ ಮಣ್ಣನ್ನು ಈಗ ನಾವೆಲ್ಲರೂ ಹಾಳು ಮಾಡುತ್ತಿದ್ದು, ಫಲವತ್ತತೆ ಕಳೆಯುತ್ತಿದ್ದೇವೆ. ಆದ್ದರಿಂದ ಕೇವಲ ನಮ್ಮ ಕಾಲಡಿಯ ಮಣ್ಣು ಎಂಬ ಅಸಡ್ಡೆ ಯಾರೊಬ್ಬರೂ ತೋರದಿರಿ. ಮಣ್ಣಿನ ಬಗ್ಗೆ ನಿರ್ಲಕ್ಷೃ ಎಂದೂ ಮಾಡದಿರಿ ಎಂದರು.
ಹಿಂದೆ ಭಾರತ ಸಂಪದ್ಬರಿತ, ವಜ್ರ, ವೈಡೂರ‌್ಯದ ತವರಾಗಿತ್ತು. ಅರಬರಿಂದ ಬ್ರಿಟಿಷರು ದೇಶದೊಳಗೆ ಕಾಲಿಡಲು ಪ್ರೇರೇಪಿಸಿದ್ದೇ ಈ ನಮ್ಮ ಶ್ರೀಮಂತಿಕೆ. ಬ್ರಿಟಿಷ್ ಎಕನಾಮಿಕ್ ಆಂಗಸ್ ಮೆಡಿಸನ್ ರಿಸರ್ಚ್ ಅಂಡ್ ಸರ್ವೆ ಪ್ರಕಾರ ಒಂದನೇ ಇಸವಿಯಿಂದ 1750 ರವರೆಗೆ ಶೇ. 36 ರಷ್ಟು ಜಿಡಿಪಿ ಒಳಗೊಂಡಿತ್ತು ಎಂದು ವಿವರಿಸಿದರು.
ಇದಕ್ಕೆಲ್ಲ ಕಾರಣ ಈ ನಮ್ಮ ಭೂಮಿ ತಾಯಿಯ ಮಡಿಲಿನ ಮಣ್ಣು ಕಾರಣವಾಗಿತು. ಆದರೆ
ರಾಸಾಯನಿಕ ಜಗತ್ತು ಮನುಕುಲಕ್ಕೆ ಆಪತ್ತಿನ ಬಳುವಳಿಯಾಗಿದ್ದು, ಈಗಲೂ ರಾಸಾಯನಿಕ ಮುಕ್ತ ಕೃಷಿಗೆ ಆದ್ಯತೆ ನೀಡದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಭೂಮಿಯ ಫಲವತ್ತತೆ ಉಳಿಸಿಕೊಳ್ಳಲು ಸರ್ಕಾರ ಮಣ್ಣು ಸಂರಕ್ಷಣೆ ಕಾಯ್ದೆ ಜಾರಿಗೊಳಿಸಬೇಕು ಎಂದರು.
ರೈತ ಕಲ್ಯಾಣ ಪದಾಧಿಕಾರಿಗಳಾದ ಹೇಮಂತ್ ಕುಮಾರ್, ಜಗದೀಶ್ ಕಣೆನೂರು, ಪ್ರತಾಪ್, ಹರೀಶ್.ಪಿ.ಗೌಡ, ಅನಿಲ್, ಕಂದಸ್ವಾಮಿ, ಪುನೀತ್, ಮಾದೇಗೌಡ, ಸಂಜಯ್, ಲೋಕೇಶ್, ದಾಸೇಗೌಡ, ನವೀನ್ ಪಟೇಲ್, ಮಂಜು ದೇವನೂರು, ಶ್ರೀನಿವಾಸ್,ಕೆಂಡಗಣ್ಣ, ಮಂಚಯ್ಯ, ಶಿವಣ್ಣ, ರವಿ, ಶಂಕರ್, ಶ್ರೀನಿವಾಸ್, ಬಸವರಾಜ್, ಕಾಂಗ್ರೆಸ್ ಮುಖಂಡ ಹಿನಕಲ್ ಉದಯ್, ಗ್ರಾಪಂ ಮಾಜಿ ಸದಸ್ಯೆ ಮಂಜುಳಾ ಮಂಜುನಾಥ್, ಗ್ರಾಪಂ ಮಾಜಿ ಅಧ್ಯಕ್ಷ ಜೆ.ಮಹದೇವು, ಹೈರಳ್ಳಿ ಮಹದೇವು, ಸೋಮೇಶ್ವರ ಗ್ರಾಪಂ ಅಧ್ಯಕ್ಷೆ ರಾಜಮ್ಮ ಮಾದೇಗೌಡ, ಪಿಡಿಒ ಪ್ರಕಾಶ್ ರಾಯನಹುಂಡಿ, ವರುಣಾ ವಿಧಾನಸಭಾ ಕ್ಷೇತ್ರದ ರೈತ ಕಲ್ಯಾಣ ಸಂಘದ ಅಧ್ಯಕ್ಷ ನಾಗರಾಜು, ಸಂಘಟನಾ ಕಾರ್ಯದರ್ಶಿ ಆರ್. ಯೋಗೇಶ್ ಇತರರು ಇದ್ದರು.