

ಹುಬ್ಬಳ್ಳಿ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಭ್ರಷ್ಟಾಚಾರ ಮಿತಿಮೀರಿದೆ. ಆದರೂ, ಯಾವ ಪುರುಷಾರ್ಥಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕಾಂಗ್ರೆಸ್ ಸಮಾವೇಶ ಆಯೋಜಿಸಿದ್ದಾರೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜನರ ವಿಶ್ವಾಸವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದುಕೊಂಡಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ. ಸರ್ಕಾರಿ ಕಚೇರಿಗಳಲ್ಲಿ ಲಂಚ ನೀಡದೆ ಯಾವುದೇ ಕೆಲಸಗಳು ಆಗುತ್ತಿಲ್ಲ. ಬಿಲ್ ಪಾವತಿಯಾಗದ ಕಾರಣ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಯಾರಿಗೆ ಲಾಭವಾಗಿದೆ? ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಬಹಳ ಬಲಿಷ್ಠವಾಗಿದೆ. ಅವರು ಯಾವುದೇ ಸಂಕಲ್ಪ ಮಾಡಿದರೂ ಸಾಧಿಸದೆ ಬಿಡುವುದಿಲ್ಲ. ಭಯೋತ್ಪಾದಕರ ನೆಲೆಗಳನ್ನು ನಾಶಗೊಳಿಸಲಾಗಿದೆ. ಇದು ಮೋದಿ ನ್ಯಾಯಕತ್ವಕ್ಕೆ ಹಾಗೂ ಸೈನಿಕರ ಪರಿಶ್ರಮದಿಂದ ಸಿಕ್ಕ ಜಯವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ನಲ್ಲಿ ಒಳ ಜಗಳ ನಡೆಯುತ್ತಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಮಧ್ಯೆ ಗೊಂದಲಗಳಿವೆ. ಹೈಕಮಾಂಡ್ನಲ್ಲಿ ನಿರ್ಧಾರವಾದಂತೆ ಅಧಿಕಾರ ಬಿಟ್ಟು ಕೊಡಬೇಕಾಗುತ್ತದೆ. ಆಗ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗುತ್ತದೆ. ಬಿಜೆಪಿಯಿಂದ ಸರ್ಕಾರ ಬಿಳಿಸುವ ಯಾವುದೇ ಪ್ರಯತ್ನ ನಡೆದಿಲ್ಲ. ಕಾಂಗ್ರೆಸ್ ಮುಖಂಡರ ಆತಂರಿಕ ಜಗಳದಿಂದ ಸರ್ಕಾರ ಪತನ ಆಗಲಿದೆ ಎಂದರು.