ನೇಕಾರರಿಗೆ ಪರಿಹಾರ ನೀಡಿ

01010
Published on

ಬೆಳಗಾವಿ: ಕರೊನಾ ಮಹಾಮಾರಿಯ ಹಾವಳಿ ಹಾಗೂ ಲಾಕ್‌ಡೌನ್ ಸಂಕಷ್ಟಕ್ಕೆ ಸಿಲುಕಿರುವ ನೇಕಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಸರ್ಕಾರ ನೇಕಾರರ ನೆರವಿಗೆ ಬರಬೇಕು. ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿ ನೂರಾರು ನೇಕಾರರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ನೇಕಾರರ ಬದುಕು ಬೀದಿಗೆ ಬಿದ್ದಿದೆ. ಉಪಜೀವನಕ್ಕೆ ಬೇರೆ ಮಾರ್ಗ ಕಾಣುತ್ತಿಲ್ಲ. ಹೀಗಾಗಿ ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಸರ್ಕಾರ 300 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಬೇಕು. ಆತ್ಮಹತ್ಯೆ ಮಾಡಿಕೊಂಡವರ ಕುಟುಂಬಗಳಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು. 2 ಸಾವಿರ ರೂ. ಪರಿಹಾರವನ್ನು 5 ಸಾವಿರಕ್ಕೆ ಏರಿಸಬೇಕು. ನೇಕಾರರು ಉತ್ಪಾದಿಸಿದ ಸೀರೆಗಳನ್ನು ಸರ್ಕಾರವೇ ಖರೀದಿಸಬೇಕು.

ಎಂಬಿತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ನೇಕಾರರ ಕುಟುಂಬಗಳಿಗೆ ಜೂನ್ 18ರೊಳಗೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ನೇಕಾರರ ಧುರೀಣ ರಮೇಶ ಸೊಂಟಕ್ಕಿ, ಜಿಲ್ಲಾ ನೇಕಾರರ ವೇದಿಕೆ ಕಾರ್ಯದರ್ಶಿ ಪರಶುರಾಮ ಢಗೆ, ನೀಲಕಂಠ ಮಾಸ್ತಮರ್ಡಿ, ನಾರಾಯಣ ಕಾಮಕರ, ಶ್ರೀನಿವಾಸ ತಾಳೂಕರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಸಂಕಷ್ಟದಲ್ಲಿರುವವರಿಗೆ ದಿನಸಿ ಕಿಟ್ ವಿತರಿಸಿ: ನಗರದ ಶಹಾಪುರ, ವಡಗಾವಿ ಮತ್ತು ಖಾಸಬಾಗ್ ಪ್ರದೇಶದಲ್ಲಿರುವ ಕೂಲಿ ನೇಕಾರರಿಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಬೇಕು ಎಂದು ಒತ್ತಾಯಿಸಿ ನೇಕಾರ ಕಾರ್ಮಿಕರ ಬಳಗದ ಪದಾಧಿಕಾರಿಗಳು ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಕೀರ್ತಪ್ಪ ಗೋಟೂರ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು. ಸೋಮು ಕವಡಿ, ಶಂಕರ ಢವಳಿ, ರವಿ ಪಾಟೀಲ, ಸಾಗರ ಸತ್ಪುತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net