ಸಂಚಾರಕ್ಕೆ ‘ಹಾಟ್‌ಸ್ಪಾಟ್’ ಸಂಚಕಾರ

1RAVIG5-Web
ಹಿರೇಬಾಗೇವಾಡಿ ಗ್ರಾಮದಲ್ಲಿ ಹಾಯ್ದು ಹೋಗಿರುವ ಎನ್‌ಎಚ್-4ನಲ್ಲಿ ವಾಹನಗಳ ಸಂಚಾರ.
Published on

ಬೆಳಗಾವಿ: ಕೇವಲ 22 ಸಾವಿರ ಜನಸಂಖ್ಯೆ ಹೊಂದಿರುವ ಹಳ್ಳಿ ಹಿರೇಬಾಗೇವಾಡಿಯಲ್ಲಿ ಕಳೆದೆರಡು ವಾರಗಳಿಂದ ಕರೊನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿದ್ದು, ದೇಶದ ಗಮನ ಸೆಳೆದಿದೆ. ಕೋವಿಡ್-19 ಪ್ರಕರಣಗಳಲ್ಲಿ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿರುವ ಬೆಳಗಾವಿ ಜಿಲ್ಲೆಯ ಅರ್ಧದಷ್ಟು ಪ್ರಕರಣ ಇದೊಂದೇ ಊರಲ್ಲಿ ದೃಢಪಟ್ಟಿದೆ. ಇದರಿಂದಾಗಿ ಕರೊನಾ ಸಾಮುದಾಯಿಕವಾಗಿದೆಯೇ ಎಂಬ ಆತಂಕ ಹೆಚ್ಚುತ್ತಿದೆ.
ಹಿರೇಬಾಗೇವಾಡಿಯಲ್ಲಿ ಈವರೆಗೂ 37 ಜನರಲ್ಲಿ ಸೋಂಕು ದೃಢಪಟ್ಟಿದ್ದು, ಮಾರಕ ವೈರಸ್‌ಗೆ ವೃದ್ಧೆಯೋರ್ವಳು ಬಲಿಯಾಗಿದ್ದಾಳೆ. ಜನರ ಆರೋಗ್ಯ ತಪಾಸಣೆ ನಡೆಸುತ್ತಿದ್ದ ಆಶಾ ಕಾರ್ಯಕರ್ತೆಗೂ ಸೋಂಕು ತಗುಲಿರುವುದು ಇನ್ನಷ್ಟು ಭೀತಿ ಆವರಿಸಿದೆ.

ಪಾಲನೆಯಾಗದ ಮಾರ್ಗಸೂಚಿ: ಕರೊನಾ ಸೋಂಕಿತರ ಪ್ರದೇಶವನ್ನು ಕಂಟೈನ್ಮೆಂಟ್ ಎಂದು ಘೋಷಿಸಿ, ಸೋಂಕು ಹರಡದಂತೆ ತಡೆಗಟ್ಟಲು ಆ ಪ್ರದೇಶದಲ್ಲಿ ಸಂಚಾರ ನಿರ್ಬಂಧಿಸಬೇಕು. ಅಲ್ಲಿನ ಜನತೆಗೆ ಅಗತ್ಯ ಸೇವೆ ಒದಗಿಸಲು ಹಾಗೂ ಆರೋಗ್ಯ ತಪಾಸಣೆಗಾಗಿ ಸಂಚರಿಸುವ ವಾಹನಗಳಿಗೆ ತಪ್ಪದೇ ಸ್ಯಾನಿಟೈಸರ್ ಮಾಡಬೇಕೆಂದು ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಆದರೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಅದ್ಯಾವುದೂ ಇಲ್ಲಿ ಪಾಲನೆಯಾಗುತ್ತಿಲ್ಲ.

ಸಾವಿರಾರು ವಾಹನಗಳ ಸಂಚಾರ: ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಿರೇಬಾಗೇವಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳನ್ನೂ ಬಂದ್ ಮಾಡಿ ಕಟ್ಟೆಚ್ಚರ ವಹಿಸಲಾಗಿದೆ. ಆದರೆ, ಅದೇ ಗ್ರಾಮವನ್ನು ಇಬ್ಭಾಗವಾಗಿಸಿ ಹಾಯ್ದು ಹೋಗುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮಾತ್ರ ನಿತ್ಯವೂ ರಾಜ್ಯದ ವಿವಿಧ ಜಿಲ್ಲೆ ಹಾಗೂ ಹೊರರಾಜ್ಯಗಳಿಗೆ ತರಕಾರಿ, ದಿನಸಿ ಸೇರಿದಂತೆ ಅಗತ್ಯ ಸರಕು ಸಾಗಿಸುವ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಆದರೂ ಯಾವುದೇ ವಾಹನಗಳಿಗೆ ಕೇಂದ್ರದ ಮಾರ್ಗಸೂಚಿಯಂತೆ ಸ್ಯಾನಿಟೈಸರ್
ಸಿಂಪಡಣೆ ಮಾಡುತ್ತಿಲ್ಲ. ಇದರಿಂದಾಗಿ ಆ ವಾಹನಗಳ ಸೇವೆ ಪಡೆಯುವ ಇತರ ಜಿಲ್ಲೆಗಳಲ್ಲಿಯೂ ಕರೊನಾ ಸೋಂಕಿನ ಭಯ ಹುಟ್ಟಿಸುತ್ತಿವೆ.
ಜನಪ್ರತಿನಿಧಿಗಳ ಸಭೆ: ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿರುವ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗುತ್ತಿದ್ದು, ಆರೋಗ್ಯ ತಪಾಸಣೆಗೆ ಒಂದು ಮೊಬೈಲ್ ಕ್ಲಿನಿಕ್ ಆರಂಭಿಸಲಾಗಿದೆ. ಅತೀ ಸಮೀಪದಲ್ಲೇ ಇಲ್ಲಿ ಮನೆಗಳು ನಿರ್ಮಾಣವಾಗಿದ್ದರಿಂದ ಕಂಟೈನ್ಮೆಂಟ್‌ರೆನ್ ಎಂದು ಘೋಷಿಸಿದ ನಂತರವೂ ಸೋಂಕು ಹಬ್ಬುತ್ತಿದೆ ಎಂದು ಸ್ಥಳೀಯರೊಂದಿಗೆ ಸಭೆ ನಡೆಸಿರುವ ಜನಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ.

ಬೆಳಗಾವಿ ಜಿಲ್ಲಾಡಳಿತದಿಂದ ನಿರ್ಲಕ್ಷ್ಯಆರೋಪ

ತಬ್ಲಿಘಿಗಳಿಂದ ಆರಂಭಗೊಂಡ ಕರೊನಾ ಸೋಂಕು ಇದೀಗ ಅವರ ನೆರೆಹೊರೆಯವರಲ್ಲಿಯೂ ದೃಢಪಟ್ಟಿದೆ. ಇದರಿಂದ ಇಡೀ ಊರು ಸೋಂಕಿನ ಸೂತಕದಲ್ಲಿದ್ದು, ಕೃಷಿ ಚಟುವಟಿಕೆಗಳೂ ಸಹ ಸ್ತಬ್ಧಗೊಂಡಿವೆ. ಸೋಂಕು ಹರಡುವಿಕೆ ತಡೆಗಟ್ಟಲು ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕಿದ್ದ ಜಿಲ್ಲಾಡಳಿತ ಈ ಗ್ರಾಮದಲ್ಲಿ ತುರ್ತು ಕ್ರಮ ಕೈಗೊಳ್ಳದೇ ಕೇವಲ ಸೀಲ್‌ಡೌನ್ ಮಾಡಿ ನಿರ್ಲಕ್ಷೃವಹಿಸಿದೆ. ಗ್ರಾಮದ ಬೀದಿಗಳಲ್ಲಿ ಈವರೆಗೂ ಸೋಂಕು ನಿವಾರಕ ಔಷಧವನ್ನೂ ಸಿಂಪಡಿಸಿಲ್ಲ ಎಂದು ಹಿರೇಬಾಗೇವಾಡಿ ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೆ, ಶೀಘ್ರ ಎಲ್ಲರ ಗಂಟಲು ದ್ರವ ಮಾದರಿ ಪರೀಕ್ಷಿಸುವಂತೆಯೂ ಒತ್ತಾಯಿಸುತ್ತಿದ್ದಾರೆ.

ವಿಮಾನ ಹಾಗೂ ಹಡುಗುಗಳಲ್ಲಿ ಸಂಚರಿಸುವವರಲ್ಲೇ ಕರೊನಾ ದೃಢಪಟ್ಟಿರುವಾಗ, ಕಂಟೈನ್ಮೆಂಟ್ ಪ್ರದೇಶದಲ್ಲಿಯೇ ಸಂಚರಿಸುವ ವಾಹನ ಸವಾರರಿಗೆ ಸೋಂಕು ತಗಲುವುದಿಲ್ಲವೇ? ಕೂಡಲೇ ರಾಜ್ಯ ಸರ್ಕಾರ ರಾಷ್ಟ್ರೀಯ ಹೆದ್ದಾರಿ -4ರ ಮೂಲಕ ಕರೊನಾ ಹಾಟ್‌ಸ್ಪಾಟ್ ಹಿರೇಬಾಗೇವಾಡಿ ಮಾರ್ಗದಲ್ಲಿ ಬರುವ ಎಲ್ಲ ವಾಹನಗಳಿಗೆ ರಸ್ತೆಯಲ್ಲಿಯೇ ಸ್ಯಾನಿಟೈಸರ್ ಸಿಂಪಡಣೆ ಮಾಡುವ ಕ್ರಮ ಕೈಗೊಳ್ಳಬೇಕು. | ನಾಗರಾಜ ದೊಡಮನಿ, ಮಹಾದೇವ ಪಾಟೀಲ, ಅಂತರ್ ಜಿಲ್ಲಾ ದಿನಸಿ ಸರಬುರಾಜುದಾರರು, ಬೆಳಗಾವಿ ಹಿರೇಬಾಗೇವಾಡಿ ಗ್ರಾಮದಿಂದ ಇನ್ನಿತರ ಹಳ್ಳಿಗಳಿಗೆ ಸಂಪರ್ಕಿಸುವ ರಸ್ತೆಗಳನ್ನು ಬಂದ್ ಮಾಡಲಾಗಿದೆ, ಅಲ್ಲಿ ತುರ್ತು ಸಂದರ್ಭದಲ್ಲಿ ಸಂಚರಿಸುವ ಎಲ್ಲ ವಾಹನಗಳಿಗೆ ಸ್ಯಾನಿಟೈಸರ್ ಸಿಂಪಡಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ-4ಅನ್ನು ಬಂದ್ ಮಾಡಲಾಗಿಲ್ಲ. ಅಲ್ಲಿ ದಿನವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅವುಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತಿಲ್ಲ. ಡಾ. ಎಸ್.ಬಿ. ಬೊಮ್ಮನಹಳ್ಳಿ ಜಿಲ್ಲಾಧಿಕಾರಿ

| ರವಿ ಗೋಸಾವಿ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net