ಸಂಚಾರಕ್ಕೆ ತೊಡಕಾದ ವಿದ್ಯುತ್ ಕಂಬ

12 HATTI 02
ಹಟ್ಟಿಯಲ್ಲಿ ನಡು ರಸ್ತೆಯಲ್ಲಿ ಹಾಕಲಾದ ಹೈಮಾಸ್ಟ್ ವಿದ್ಯುತ್ ಕಂಬ.
Published on

ಹಟ್ಟಿ ಚಿನ್ನದಗಣಿ :ಪಟ್ಟಣದ ಹಳೇ ಬಸ್ ನಿಲ್ದಾಣದಲ್ಲಿರುವ ಹೈಮಾಸ್ಟ್ ವಿದ್ಯುತ್ ದೀಪದ ಕಂಬದಿಂದ ಸುಗಮ ಸಂಚಾರ ಸವಾಲಾಗಿದ್ದು, ಅಪಾಯಕಾರಿಯಾಗಿ ಪರಿಣಮಿಸಿದೆ. ಲಿಂಗಸಗೂರು, ಸಿರವಾರ, ಪಾಮನಕಲ್ಲೂರು, ಗುರುಗುಂಟಾ ಭಾಗದಿಂದ ಹಟ್ಟಿ ಕೇಂದ್ರಭಾಗಕ್ಕೆ ಬರವ ಬಸ್‌ಗಳಿಗೆ ಇದು ಕಿರಿಕಿರಿಯಾಗಿ ಪರಿಣಮಿಸಿದೆ.

ಹೊರಗಿನಿಂದ ಬರುವ ಮತ್ತು ಒಳರಸ್ತೆಗಳಿಂದ ಆಗಮಿಸುವ ವಾಹನಗಳ ಸಂಗಮವಾಗಿರುವ ಈ ವೃತ್ತ ತುಂಬಾ ಇಕ್ಕಟ್ಟಾಗಿದ್ದು, ಗೊಂದಲದಿಂದ ಕೂಡಿದೆ. ವಾಹನಗಳು ತಿರುವು ಪಡೆವಾಗ ಒಳರಸ್ತೆಗಳಿಂದ ರಭಸವಾಗಿ ವಾಹನಗಳು ನುಗ್ಗಿ ಬರುತ್ತವೆ. ಇದರ ಪರಿಣಾಮ ಆಗಾಗ್ಗೆ ಅಪಘಾತ, ಚಾಲಕರ ನಡುವೆ ಘರ್ಷಣೆ ನಡೆಯುತ್ತಲೇ ಇರುತ್ತದೆ.

ಪಟ್ಟಣದ ಸುತ್ತಲಿನ ಕಡೆಯಿಂದ ಬರುವ ಖಾಸಗಿ-ಸಾರಿಗೆ ಬಸ್‌ಗಳು ಒಂದೆಡೆ ಬರುತ್ತಿದ್ದರೆ, ಮತ್ತೊಂದೆಡೆ ಸರ್ಕಲ್ ಸುತ್ತ ಡಬ್ಬಾ ಅಂಗಡಿ, ಎಗ್‌ರೈಸ್ ಅಂಗಡಿ, ಹಣ್ಣಿನ ಅಂಗಡಿಗಳ ತೆರೆಯಲಾಗಿದ್ದು, ದ್ವಿಚಕ್ರ ವಾಹನಗಳು ಸಹ ನಿಲ್ಲಿಸಲಾಗುತ್ತಿದೆ. ಇದರಿಂದ ಬಸ್‌ಗಳು ರಸ್ತೆಯ ಮೇಲೆಯೇ ನಿಲ್ಲುವ ಸ್ಥಿತಿಯಿದೆ. ವಾಹನಗಳು ಲೈಟ್ ಕಂಬವನ್ನೆ ಸುತ್ತು ಹೊಡೆದು ಸಾಗುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಲೈಟ್ ಕಂಬಕ್ಕೆ ಡಿಕ್ಕಿಯಾಗುವ ಸಾಧ್ಯತೆಗಳಿವೆ.

ಭಾನುವಾರ ಬಂತೆಂದರೆ ಮತ್ತಷ್ಟು ಸಾರಿಗೆ ಸಂಚಾರ ನಿಯಮಗಳು ಪಾಲನೆ ಕಷ್ಟವಾಗುತ್ತಿದ್ದು, ಪೊಲೀಸರಿಗೆ ತಲೆನೋವಾಗಿದೆ. ಹಟ್ಟಿಯಲ್ಲಿ ಭಾನುವಾರ ಸಂತೆ ನಡೆಯುವುದರಿಂದ ಹಳ್ಳಿಗಳ ಜನ ಇಲ್ಲಿಗೆ ಬರುತ್ತಾರೆ. ಇದರಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಎರಡು ಬದಿಯಲ್ಲಿ ಪುಟ್‌ಪಾತ್ ಮೇಲೆಯೇ ಅಂಗಡಿಗಳು ಇರುವುದರಿಂದ ರಸ್ತೆ ಬದಿಯಲ್ಲಿಯೇ ವಾಹನಗಳ ನಿಲುಗಡೆಯಾಗುತ್ತದೆ. ಪೊಲೀಸರು ವಾಹನಗಳನ್ನು ತೆರವುಗೊಳಿಸಿ ಸಂಚಾರ ಸುಗಮಕ್ಕೆ ಅನುಕುಲ ಮಾಡುಷ್ಟರಲ್ಲೆ ಹೈರಾಣಾಗುತ್ತಿದ್ದಾರೆ.

ರಸ್ತೆ ಮಧ್ಯದಲ್ಲಿ ಹಾಕಲಾದ ಹೈಮಾಸ್ಟ್ ದೀಪದ ಕಂಬವನ್ನು ತೆರವುಗೊಳಿಸಬೇಕು. ಯಾವುದಾದರು ವಾಹನ ಕಂಬಕ್ಕೆ ಅಪಘಾತವಾದರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳೇ ಜವಾಬ್ದಾರರು. ಆದಷ್ಟು ಬೇಗ ಕಂಬವನ್ನು ತೆರವುಗೊಳಿಸಬೇಕು. ಹೊಸಕೇರಪ್ಪ ಕೆ ಪೊಲೀಸ್ ಇನ್‌ಸ್ಪೆಕ್ಟರ್, ಹಟ್ಟಿ ಪೊಲೀಸ್ ಠಾಣೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net