

ಹುಬ್ಬಳ್ಳಿ: ಪ್ರವಾಸೋದ್ಯಮಕ್ಕೆ ಭಾರತದಲ್ಲಿ ವಿಪುಲ ಅವಕಾಶಗಳಿದ್ದರೂ, ಅವುಗಳನ್ನು ಸರಿಯಾಗಿ ಬಳಕೆ ಮಾಡಿಕೊಂಡಿಲ್ಲ. ಪ್ರವಾಸೋದ್ಯಮದಲ್ಲಿ ಇರುವವರು ಇವುಗಳ ಸದ್ಬಳಕೆಗೆ ಕ್ರಮವಹಿಸಲು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಸ್ವರ್ಣಾ ಗ್ರುಪ್ ಆಫ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಹೇಳಿದರು.
ಹುಬ್ಬಳ್ಳಿಯ ಜೆ.ಸಿ.ನಗರದ ಅವೆನ್ಯೂ ಎಂಪೋರಿಯಂನಲ್ಲಿ ಭಾನುವಾರ ಪಂಚರತ್ನ ಹಾಲಿಡೇಸ್ನ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಕೆಲವು ದೇಶಗಳು ಪ್ರವಾಸೋದ್ಯಮಕ್ಕಾಗಿಯೇ ಮೀಸಲಿದ್ದು, ಅಲ್ಲಿಯ ಆದಾಯದ ಮೇಲೆ ಅವಲಂಬಿತವಾಗಿವೆ. ಆದರೆ, ಭಾರತದ ಕರಾವಳಿ ತೀರವು ಪ್ರವಾಸೋದ್ಯಮಕ್ಕೆ ಸದ್ಬಳಕೆಯಾಗಿಲ್ಲ ಎಂದರು.
ಆಂದ್ರಪ್ರದೇಶ, ಕೇರಳ, ಕರ್ನಾಟಕ, ತಮಿಳನಾಡು, ಇನ್ನಿತರ ಪ್ರದೇಶವು ಪ್ರವಾಸೋದ್ಯಮಕ್ಕೆ ಪೂರಕವಾಗಿದೆ. ಗೋವಾ ಹೊರತುಪಡಿಸಿ ಯಾವುದೇ ರಾಜ್ಯಗಳು ಪ್ರವಾಸೋದ್ಯಮ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿ ಕಂಡಿಲ್ಲ. ಟೂರಿಸಂ ಪ್ರಾಂಚೈಸಿಗಳು ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ಗ್ರಾಹಕರಿಗೆ ಸೇವೆ ಸಲ್ಲಿಸಿ ಉತ್ತಮ ಲಾಭ ಪಡೆಯಬೇಕು ಎಂದು ಸಲಹೆ ಮಾಡಿದರು.
ಸ್ವರ್ಣಾ ಜ್ಯುವೆಲರ್ಸ್ ಮಾಲೀಕ ಗುಜ್ಜಾಡಿ ಗೋಪಾಲಕೃಷ್ಣ ನಾಯಕ ಮಾತನಾಡಿ, ಉದ್ಯಮಿಗಳು ದೊಡ್ಡ ಗುರಿ ಇಟ್ಟುಕೊಂಡು ಕೆಲಸ ಮಾಡಬೇಕು. ಕೇವಲ ಸಣ್ಣ ಕನಸು ಕಾಣದೇ, ಉದ್ಯಮ ವಿಸ್ತರಿಸುವ ಕನಸು ಕಾಣಬೇಕು. ಈಗಾಗಲೇ ಇಲ್ಲಿಂದ ಹೊರ ದೇಶಗಳಿಗೆ ಪ್ರವಾಸಕ್ಕೆ ಹೋಗುವುದು ಸಾಮಾನ್ಯ. ಹಾಗಾಗಿ ವಿದೇಶ ಪ್ರವಾಸಿಗರನ್ನು ತರುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದರೆ, ಇಲ್ಲಿಯ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರಕುತ್ತದೆ ಎಂದರು.
ಪತ್ರಕರ್ತ ಡಾ. ಬಂಡು ಕುಲಕರ್ಣಿ ಮಾತನಾಡಿದರು. ಪಂಚರತ್ನ ಹಾಲಿಡೇಸ್ ಮಾಲೀಕ ಎಂ.ಎನ್. ಭಟ್, ದತ್ತಾತ್ರೇಯ ಭಟ್, ಇತರರು ಇದ್ದರು.