

ಹಟ್ಟಿಚಿನ್ನದಗಣಿ: ಹಟ್ಟಿಚಿನ್ನದಗಣಿ ಕಂಪನಿಯಲ್ಲಿ 168 ವಿವಿಧ ತಾಂತ್ರಿಕ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಗಣಿ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಬಿ. ಶೆಟ್ಟಣ್ಣನವರ್ ಹೇಳಿದರು.
ಗಣಿ ಕಂಪನಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, 37 ಅಧಿಕಾರಿಗಳ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆದಿದ್ದು, 168 ಹುದ್ದೆಗಳನ್ನು ಟಿಸಿಐಎಲ್ ಮೂಲಕ ಪರೀಕ್ಷೆ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುವುದು.
ಹಟ್ಟಿಚಿನ್ನದಗಣಿ ಕಂಪನಿ ನೂತನ ಆಸ್ಪತ್ರೆ ನಿರ್ಮಾಣ, ಆಡಳಿತ ಕಚೇರಿ, 1037 ಕಾರ್ಮಿಕ ವಸತಿ ಗೃಹ ನಿರ್ಮಾಣ ಸೇರಿ 670 ಕೋಟಿ ರೂ.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಾರಂಭಕ್ಕೆ ಸರ್ಕಾರದ ಕ್ಯಾಬಿನೆಟ್ ಅನುಮತಿಗೆ ಕಳುಹಿಸಲಾಗಿದೆ ಎಂದರು.
ಕಳೆದ 3 ತಿಂಗಳಿಂದ 15 ಕೆಜಿ ಚಿನ್ನ ಉತ್ಪಾದನೆಯಲ್ಲಿ ಹಿನ್ನೆಡೆ ಕಂಡಿದೆ. ಅಕ್ಟೋಬರ್ ತಿಂಗಳಿಂದ ಪ್ರತಿದಿನ 3 ಸಾವಿರ ಮೆಟ್ರಿಕ್ ಟನ್ ಅದಿರು ಬೀಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಕಂಪನಿಗೆ 42 ಮರಳು ಬ್ಲಾಕ್‌ಗಳಿದ್ದು, 15ಕ್ಕೆ ಪರಿಸರ ಇಲಾಖೆಯಿಂದ ಅನುಮೋದನೆ ಸಿಕ್ಕಿದ್ದು, 12 ಬ್ಲಾಕ್‌ಗಳು ಕಾರ್ಯನಿರ್ವಹಿಸುತ್ತಿವೆ.
ಮರಳು ಪೂರೈಕೆಗೆ ಸರ್ಕಾರ ಪ್ರತ್ಯೇಕ ಮಂಡಳಿ ರಚಿಸಬೇಕು. ಶೇ.32 ರಷ್ಟು ಕಾರ್ಮಿಕರು ಗೈರಾಗುತ್ತಿದ್ದು, ಸಭೆ ನಡೆಸಿ ದಕ್ಷತೆಯಿಂದ ಕಾರ್ಯ ನಿರ್ವಹಿಸಲು ಎಚ್ಚರಿಸಲಾಗಿದೆ. ಈಗ ಶೇ. 20ರಷ್ಟು ಕಾರ್ಮಿಕರು ಗೈರಾಗುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಕರ್ತವ್ಯದಿಂದ ವಜಾಗೊಳಿಸಲಾಗುವುದೆಂದು ಎಚ್ಚರಿಸಿದರು.
ಬ್ರಿಟಿಷರ ಕಾಲಾವಧಿಯಲ್ಲಿ ಚಾಲನೆಯಲ್ಲಿದ್ದ ವಂದಲಿ ಚಿನ್ನದಗಣಿಯನ್ನು ಶೀಘ್ರ ಪುನರಾರಂಭಿಸಲಾಗುವುದು. ಸಿರವಾರ ತಾಲೂಕಿನ ಹೀರಾ-ಬುದ್ಧಿನ್ನಿ ಗಣಿಗಾರಿಕೆ ವಿಸ್ತರಣೆಗೆ ಸಿದ್ಧತೆ ನಡೆದಿದೆ.
ಮುಂದಿನ ಎರಡ್ಮೂರು ತಲೆಮಾರಿನವರೆಗೆ ಗಣಿಗಾರಿಕೆ ನಡೆಸುವ ದೂರದೃಷ್ಟಿ ಮೂಲಕ ಉತ್ಪಾದನೆ ಕೈಗೊಳ್ಳಲು ಕ್ರಮವಹಿಸಲಾಗಿದೆ ಎಂದರು. ಆಪ್ತ ಕಾರ್ಯದರ್ಶಿ ಹೆಚ್.ರಮೇಶ್ ಇದ್ದರು.