

ರಾಯಬಾಗ: ಬಡ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಜೊಲ್ಲೆ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ವಸತಿಯೊಂದಿಗೆ ಶಿಕ್ಷಣ ನೀಡಲು ಶಶಿಕಲಾ ಜೊಲ್ಲೆ ವಿದ್ಯಾರ್ಥಿ ವೇತನ ಪ್ರಾರಂಭಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜೊಲ್ಲೆ ಉದ್ಯೋಗ ಸಮೂಹದ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಹೇಳಿದರು.
ಪಟ್ಟಣದ ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆಯ ಸತೀಶ ಚೌಗುಲೆ ಸ್ವತಂತ್ರ ಪದವಿಪೂರ್ವ ಕಾಲೇಜನಲ್ಲಿ ಅಣ್ಣಾಸಾಹೇಬ ಜೊಲ್ಲೆ ಸ್ವತಂತ್ರ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯ ಪ್ರವೇಶಕ್ಕಾಗಿ ಎಸ್‌ಎಸ್‌ಎಲ್‌ಸಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಭಾನುವಾರ ಹಮ್ಮಿಕೊಂಡಿದ್ದ ಪ್ರವೇಶ ಪರೀಕ್ಷೆಗೆ ಚಾಲನೆ ನೀಡಿ ಮಾತನಾಡಿದರು.
ಪರೀಕ್ಷೆಯಲ್ಲಿ ಆಯ್ಕೆಯಾದ 20 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒಟ್ಟು 60 ಲಕ್ಷ ರೂ. ಮೊತ್ತದ ಶಶಿಕಲಾ ಜೊಲ್ಲೆ ವಿದ್ಯಾರ್ಥಿ ವೇತನ ನೀಡಲಾಗುವುದು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು 35 ವರ್ಷ ಸಾರ್ವಜನಿಕ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿರುವ ಅಣ್ಣಾಸಾಹೇಬ ಜೊಲ್ಲೆ ಹೆಸರಿನಲ್ಲಿ ಗುರುಕುಲ ಮಾದರಿಯಲ್ಲಿ ಎಲ್ಲ ಸೌಲಭ್ಯವುಳ್ಳ ಶಿಕ್ಷಣ ಸಂಸ್ಥೆ ಪ್ರಾರಂಭಿಸಲಾಗಿದೆ. ಇಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣ ಪ್ರವೇಶ ಪಡೆಯಲು ನೀಟ್, ಜೆಇಇ ಮತ್ತು ಕೆ-ಸೆಟ್ ಪರೀಕ್ಷೆಗಳಿಗಾಗಿ ತರಬೇತಿ ನೀಡಲಾಗುವುದು ಎಂದರು.
ಚೌಗುಲೆ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಲ್. ಬಿ.ಚೌಗುಲೆ ಮಾತನಾಡಿ, ವಿದ್ಯಾರ್ಥಿಗಳ ಸಾಧನೆಗೆ ಅನುಕೂಲವಾಗಲು ಜೊಲ್ಲೆ ಗ್ರೂಪ್ಸ್‌ದಿಂದ ಒಳ್ಳೆಯ ಕಾಲೇಜು ಪ್ರಾರಂಭಿಸಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಚೌಗುಲೆ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವಿನಯ ಚೌಗುಲೆ, ಜೊಲ್ಲೆ ಶಿಕ್ಷಣ ಸಂಸ್ಥೆಯ ವಿಜಯ ರಾವತ, ಡಾ.ಸುರೇಶ ಕೇರೂರ, ದೀಪಕ ಪಾಟೀಲ, ಮಹಾದೇವ ಶಾರಬಿದ್ರೆ, ಪ್ರಾಚಾರ್ಯ ಎಸ್.ಎಸ್.ದಿಗ್ಗೇವಾಡಿ ಇತರರು ಇದ್ದರು.