ಶೀಘ್ರದಲ್ಲೇ ರಸ್ತೆಗಿಳಿಯಲಿವೆ ಮಿನಿ ಎಲೆಕ್ಟ್ರಿಕ್​ ಬಸ್​ಗಳು

Electric Bus
Published on

ಬೆಂಗಳೂರು: ಬಿಎಂಟಿಸಿ ಗುತ್ತಿಗೆ ಆಧಾರದಲ್ಲಿ ಪಡೆಯುತ್ತಿರುವ 90 ಮಿನಿ ಎಲೆಕ್ಟ್ರಿಕ್​ ಬಸ್​ಗಳು ಎರಡು ಹಂತದಲ್ಲಿ ಪೂರೈಕೆಯಾಗಲಿದ್ದು, 6 ತಿಂಗಳೊಳಗಾಗಿ ಎಲ್ಲ ಬಸ್​ಗಳು ನಿಗಮಕ್ಕೆ ಸೇರ್ಪಡೆಗೊಳ್ಳಲಿವೆ. ಸ್ಮಾರ್ಟ್​ಸಿಟಿ ಯೋಜನೆ ಅಡಿಯಲ್ಲಿ ಲಭ್ಯವಾಗುವ 50 ಕೋಟಿ ರೂ. ಅನುದಾನ ಬಳಸಿ ಬಿಎಂಟಿಸಿ 90 ಮಿನಿ ಎಲೆಕ್ಟ್ರಿಕ್​ ಬಸ್​ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯುತ್ತಿದೆ. ಎನ್​ಟಿಪಿಸಿ ವಿದ್ಯುತ್​ ವ್ಯಾಪಾರ್​ ನಿಗಮ ಲಿಮಿಟೆಡ್​ ಟೆಂಡರ್​ ಪಡೆಯುವಲ್ಲಿ ಸಫಲವಾಗಿದ್ದು, ಸಂಸ್ಥೆಗೆ ಬಿಎಂಟಿಸಿ ಪ್ರತಿ ಕಿ.ಮೀ. ಸೇವೆಗೆ 44 ರೂ. ನೀಡಲಿದೆ.

ಒಂಭತ್ತು ಮೀಟರ್​ ಉದ್ದದ 31 ಆಸನ ಸಾಮರ್ಥ್ಯದ ಬಸ್​ಗಳನ್ನು ಎನ್​ಟಿಪಿಸಿ ಪೂರೈಸಲಿದೆ. ಎರಡು ಹಂತದಲ್ಲಿ ಬಸ್​ ಪೂರೈಕೆ ಮಾಡುವಂತೆ ಬಿಎಂಟಿಸಿ ಸೂಚಿಸಲಿದೆ. ಕಾರ್ಯಾದೇಶ ನೀಡಿದ ಆರು ತಿಂಗಳ ಒಳಗಾಗಿ ಬಸ್​ ಪೂರೈಸಬೇಕಿದ್ದು, ಮೊದಲ ಮತ್ತು ಎರಡನೇ ಹಂತದಲ್ಲಿ ತಲಾ 45 ಬಸ್​ಗಳನ್ನು ನೀಡುವಂತೆ ಷರತ್ತು ವಿಧಿಸಲಾಗುತ್ತಿದೆ.

ಸಂಸ್ಥೆಯಿಂದ ನಿರ್ವಹಣೆ: ಒಪ್ಪಂದದ ಷರತ್ತಿನ ಅನ್ವಯ ಕಾರ್ಯಾದೇಶ ಪಡೆದ ಸಂಸ್ಥೆಯೇ ಬಸ್​ ಹಾಗೂ ಅದಕ್ಕೆ ಅಗತ್ಯವಿರುವ ಚಾಲಕರನ್ನು ಒದಗಿಸುವುದರ ಜತೆಗೆ ಬಸ್​ಗಳ ನಿರ್ವಹಣೆ ಮಾಡಲಿದೆ. ಬಸ್​ಗಳನ್ನು ಚಾರ್ಜ್​ ಮಾಡಲು ಚಾರ್ಜಿಂಗ್ ಘಟಕ ಸ್ಥಾಪನೆಯ ಹೊಣೆಯೂ ಸಂಸ್ಥೆಯದ್ದಾಗಿದ್ದು, ಅದಕ್ಕೆ ಅಗತ್ಯವಿರುವ ಸ್ಥಳವನ್ನು ಬಿಎಂಟಿಸಿ ಆಯ್ದ ಡಿಪೋಗಳಲ್ಲಿ ನೀಡಲಿದೆ. ಈ ಎಲೆಕ್ಟ್ರಿಕ್​ ಬಸ್​ಗಳನ್ನು ಮೆಟ್ರೋ ಫೀಡರ್​ ಸೇವೆಗೆ ನಿಯೋಜಿಸಲು ಬಿಎಂಟಿಸಿ ತೀರ್ಮಾನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net