

ಮಡಿಕೇರಿ: ಆ.೩೦ ರಂದು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಗೃಹಲಕ್ಷ್ಮಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಚಾಲನೆ ನೀಡಲಿದ್ದು, ಕಾರ್ಯಕ್ರಮ ಯಶಸ್ಸಿಗೆ ಅಧಿಕಾರಿಗಳು ಮುಂದಾಗುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗೃಹಲಕ್ಷ್ಮಿ ಯೋಜನೆ ಚಾಲನೆಗೆ ಅಗತ್ಯ ಸಿದ್ಧತೆ ಸಂಬಂಧ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮಾಹಿತಿ ಪಡೆದು ಸಚಿವರು ಮಾತನಾಡಿದರು.
ಗೃಹಲಕ್ಷ್ಮಿ ಯೋಜನೆಯಡಿ ಪ್ರತೀ ಕುಟುಂಬದ ಯಜಮಾನಿ ಮಹಿಳೆಗೆ ೨ ಸಾವಿರ ರೂ.ಅನ್ನು ನೇರ ನಗದು ಮೂಲಕ ತಲುಪಿಸುವ ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ದೊರೆಯಲಿದೆ. ರಾಜ್ಯ ಮಟ್ಟದ ಸರ್ಕಾರಿ ಕಾರ್ಯಕ್ರಮವಾಗಿದ್ದು, ಕೊಡಗು, ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಜಿಲ್ಲೆಯ ಫಲಾನುಭವಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದರು.
ಸ್ತ್ರೀ ಸ್ವಾವಲಂಬನೆಯತ್ತ ಒಂದು ದಿಟ್ಟ ಹೆಜ್ಜೆ ಗೃಹಲಕ್ಷ್ಮಿ ಪ್ರತಿ ಮನೆ ಯಜಮಾನಿಗೆ ೨ ಸಾವಿರ ರೂ. ನೀಡುವ ಯೋಜನೆ ಜಾರಿ ಆ.೩೦ ರಂದು ಮೈಸೂರಿನಲ್ಲಿ ಚಾಲನೆಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ೧೦೩ ಗ್ರಾ.ಪಂ. ಹಾಗೂ ಸ್ಥಳೀಯ ಸಂಸ್ಥೆಗಳಿಂದ ಫಲಾನುಭವಿಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುವುದು ಮತ್ತು ಬರುವಂತಾಗಬೇಕು. ನೋಡಲ್ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡು ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮವನ್ನು ಯಶಸ್ಸುಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆ.೩೦ ರಂದು ಬೆಳಗ್ಗೆ ೧೦ ಗಂಟೆಗೆ ಮೈಸೂರಿನಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಫಲಾನುಭವಿಗಳು ಇರಬೇಕು. ಆ ನಿಟ್ಟಿನಲ್ಲಿ ಪ್ರತೀ ಗ್ರಾ.ಪಂ.ನಿಂದ ಆಗಮಿಸುವ ಫಲಾನುಭವಿಗಳ ಪಟ್ಟಿಯನ್ನು ಖಾತರಿಪಡಿಸಿಕೊಳ್ಳಬೇಕು. ಈಗಾಗಲೇ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಪ್ರತೀ ಗ್ರಾ.ಪಂ.ಹಂತದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಪಿಡಿಒಗಳು, ತಾ.ಪಂ.ಇಒಗಳು, ತಹಶೀಲ್ದಾರರು, ಸಿಡಿಪಿಒ ಸೇರಿದಂತೆ ಎಲ್ಲಾ ಹಂತದ ಅಧಿಕಾರಿಗಳು ಗೃಹಲಕ್ಷ್ಮಿ ಯೋಜನಾ ಕಾರ್ಯಕ್ರಮ ಯಶಸ್ಸುಗೊಳಿಸುವ ನಿಟ್ಟಿನಲ್ಲಿ ಕೈಜೋಡಿಸುವಂತೆ ಸಚಿವರು ಹೇಳಿದರು.
ಯಾವುದೇ ರೀತಿ ತೊಂದರೆಯಾಗದಂತೆ ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಬರಬೇಕು. ಪ್ರತೀ ಬಸ್‌ನಲ್ಲಿ ೫೦ ಮಂದಿಯ ವಾಟ್ಸ್‌ಅಪ್ ಗ್ರೂಪ್‌ನ್ನು ಮಾಡಿಕೊಂಡು ಸಮನ್ವಯತೆ ಸಾಧಿಸಿ ಸುರಕ್ಷಿತವಾಗಿ ವಾಪಸ್ಸು ಬರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.
ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯು ಸರ್ಕಾರದ ಐತಿಹಾಸಿಕ ಕಾರ್ಯಕ್ರಮವಾಗಿದೆ. ಸರ್ಕಾರದ ಯೋಜನೆ ಪ್ರತೀ ಬಡವರಿಗೂ ತಲುಪಬೇಕು. ಆ ನಿಟ್ಟಿನಲ್ಲಿ ಬಡವರವನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಬರುವಂತಾಗಬೇಕು. ಗ್ರಾ.ಪಂ. ಜತೆಗೆ ಮಡಿಕೇರಿ ನಗರ, ಕುಶಾಲನಗರ ಮತ್ತು ಸೋಮವಾರಪೇಟೆ ಪಟ್ಟಣಗಳಿಂದಲೂ ಬಸ್ ವ್ಯವಸ್ಥೆ ಮಾಡುವಂತೆ ಶಾಸಕರು ಸಲಹೆ ಮಾಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಮಾತನಾಡಿ, ನೋಡಲ್ ಅಧಿಕಾರಿಗಳಾಗಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ, ಪಂಚಾಯಿತಿ ಕಾರ್ಯದರ್ಶಿ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಆಯಾಯ ಗ್ರಾ.ಪಂ. ಕಾರ್ಯಾಲಯದಿಂದ ಹೊರಡಲಿದೆ. ಪ್ರತೀ ಬಸ್‌ಗೆ ಕನಿಷ್ಠ ೫೦ ರಂತೆ ಫಲಾನುಭವಿಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಜಿಲ್ಲೆಯಿಂದ ೫,೧೫೦ ಫಲಾನುಭವಿಗಳನ್ನು ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ನಟರಾಜ ಮಾತನಾಡಿ, ಮಾಹಿತಿ ನೀಡಿ ಜಿಲ್ಲೆಯಲ್ಲಿ ೧,೩೧,೮೬೩ ಗುರಿಯಲ್ಲಿ ೧,೦೫,೧೨೨ ಮಂದಿ ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾಗಿದ್ದು, ಶೇ.೮೧.೧೪ ರಷ್ಟು ಸಾಧನೆ ಮಾಡಲಾಗಿದೆ. ಮಡಿಕೇರಿ ತಾಲೂಕಿನಿಂದ ೧,೩೦೦, ಸೋಮವಾರಪೇಟೆ ೧,೧೫೦, ಕುಶಾಲನಗರ ೮೦೦, ಪೊನ್ನಂಪೇಟೆ ೧,೦೫೦, ವಿರಾಜಪೇಟೆ ತಾಲೂಕಿನಿಂದ ೮೫೦ ಒಟ್ಟು ೫,೧೫೦ ಗೃಹಲಕ್ಷ್ಮಿ ಯೋಜನಾ ಫಲಾನುಭವಿಗಳನ್ನು ಕರೆದುಕೊಂಡು ಹೋಗಲಾಗುತ್ತದೆ ಎಂದು ತಿಳಿಸಿದರು.
ಕೆಎಸ್‌ಆರ್‌ಟಿಸಿ ಪುತ್ತೂರು ಘಟಕದ ಜಯಕರಶೆಟ್ಟಿ ಮಾತನಾಡಿ, ಮಡಿಕೇರಿ ಕೆಎಸ್‌ಆರ್‌ಟಿಸಿ ಘಟಕದಲ್ಲಿ ೬೦ ಬಸ್‌ಗಳಿದ್ದು, ಜತೆಗೆ ಪುತ್ತೂರು ಮತ್ತಿತರ ಡಿಪೋಗಳಿಂದ ೪೦ ಕ್ಕೂ ಹೆಚ್ಚು ಬಸ್‌ಗಳು ಒಟ್ಟು ೧೦೩ ಗ್ರಾ.ಪಂ.ಗಳಿಗೆ ಬಸ್‌ನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿ.ಪಂ.ಸಿಇಒ ವರ್ಣಿತ್ ನೇಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.