

ಮಮದಾಪುರ: ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳು ರೈತರಿಗೆ ವರದಾನವಾಗಿವೆ. ಶೂನ್ಯ ಬಡ್ಡಿ ಸಾಲ ಸೌಲಭ್ಯ ಪಡೆದು ಆರ್ಥಿಕ ಸಬಲರಾಗುವ ಜತೆಗೆ ಸಂಘದ ಏಳಿಗೆಗೂ ಕೈಜೋಡಿಸಬೇಕು ಎಂದು ನಿವೃತ್ತ ಡಿಡಿಪಿಐ ಗಜಾನನ ಮನ್ನಿಕೇರಿ ಹೇಳಿದರು.
ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿ, ರೈತರು ರಸಗೊಬ್ಬರಕ್ಕೆ ಅವಲಂಬಿತರಾಗದೆ ಜಾನುವಾರು ಸಾಕಾಣಿಕೆ ಮೂಲಕ ಕೊಟ್ಟಿಗೆ ಗೊಬ್ಬರ ಬಳಸಿ ಮಣ್ಣಿನ ಲವತ್ತತೆ ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಚಂದ್ರಶೇಖರ ಕೊಣ್ಣೂರ ಮಾತನಾಡಿ, ಸದಸ್ಯರ ಸಹಕಾರ, ಸಿಬ್ಬಂದಿಯ ಪ್ರಯತ್ನ ಹಾಗೂ ಆಡಳಿತ ಮಂಡಳಿ ಮಾರ್ಗದರ್ಶನ ಲವಾಗಿ ಸಂಘ ಪ್ರಗತಿಪಥದತ್ತ ಸಾಗಿದೆ. ಸಂಘ 2,317 ಸದಸ್ಯರನ್ನು ಹೊಂದಿದ್ದು, ರೈತರಿಗೆ 10.76 ಕೋಟಿ ರೂ. ಸಾಲ ವಿತರಿಸಿದೆ. ಪ್ರಸಕ್ತ ಸಾಲಿನಲ್ಲಿ 10.17 ಲಕ್ಷ ರೂ. ನಿವ್ವಳ ಲಾಭಗಳಿಸಿದೆ. ಮುಂಬರುವ ದಿನಗಳಲ್ಲಿ ರಸಗೊಬ್ಬರ ಸಿಂಪಡಣೆಗೆ ಬಾಡಿಗೆ ಆಧಾರದ ಮೇಲೆ ಡ್ರೋನ್ ವಿತರಿಸಲಾಗುವುದು ಎಂದರು.
ರಸಗೊಬ್ಬರ ಕಂಪನಿಯ ಕ್ಷೇತ್ರಾಧಿಕಾರಿ ನಾಗೇಶಸ್ವಾಮಿ, ವಿಜಯ ಆರ್. ಮಾತನಾಡಿದರು.
ಸಂಘದ ಮುಖ್ಯ ಕಾರ್ಯದರ್ಶಿ ಮಹಾಂತೇಶ ಸಿಂಗಾರಿಕೊಪ್ಪ ವಾರ್ಷಿಕ ವರದಿ ಮಂಡಿಸಿ ಷೇರು ಸದಸ್ಯರಿಗೆ ಶೇ 5ರಷ್ಟು ಲಾಭಾಂಶ ವಿತರಿಸಲಾಗುವುದು ಎಂದರು.
ಮಲ್ಲಪ್ಪ ವಾಲಿ, ಮಲ್ಲಪ್ಪ ಕಮತ, ಉಪಾಧ್ಯಕ್ಷ ಬಾಳಪ್ಪ ಪಾಟೀಲ, ನಿರ್ದೇಶಕರಾದ ಚನ್ನಪ್ಪ ಗಾಣಗಿ, ಸೂರ್ಯಕಾಂತ ಗುದಗನವರ, ಬಸವರಾಜ ಕಮತ, ಲಕ್ಷ್ಮಣ ಶಿವಾಪುರ, ಯಲ್ಲಪ್ಪ ಭಜಂತ್ರಿ, ಸುಭಾಸ ಲಂಗೋಟಿ, ಸುಮಿತ್ರಾ ಬನ್ನೂರ, ಶಾರವ್ವ ಕಮತ, ಮಲ್ಲಪ್ಪ ಒಂಟಿ, ಪ್ರೇಮಾ ಜನಮಟ್ಟಿ ಇತರರಿದ್ದರು. ಮಹಾದೇವ ಕುಂಬಾರ ಸ್ವಾಗತಿಸಿದರು. ಅರುಣಕುಮಾರ ಕಮತ ನಿರೂಪಿಸಿದರು.