

ಬೆಳಗಾವಿ: ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಈಗಿನಿಂದಲೇ ಪಕ್ಷ ಸಂಘಟನೆಯಲ್ಲಿ ತೊಗಬೇಕು. ಆ ಮೂಲಕ ಪಕ್ಷದ ಬೇರು ಇನ್ನಷ್ಟು ಗಟ್ಟಿಯಾಗಲು ನಿಷ್ಠೆಯಿಂದ ದುಡಿಯಬೇಕು ಎಂದು ಶಾಸಕ ಅಭಯ ಪಾಟೀಲ ಸಲಹೆ ನೀಡಿದ್ದಾರೆ.
ಇಲ್ಲಿನ ರಾಮನಗರದ ಧರ್ಮನಾಥ ಭವನದಲ್ಲಿ ರಾಜ್ಯ ಬಿಜೆಪಿಯ ಪ್ರಶಿಕ್ಷಣ ಪ್ರಕೋಷ್ಠ ವತಿಯಿಂದ ಸೋಮವಾರ ಆಯೋಜಿಸಿದ್ದ ‘ಬೆಳಗಾವಿ ಗ್ರಾಮಾಂತರ, ಮಹಾನಗರ ಮತ್ತು ಚಿಕ್ಕೋಡಿ ಜಿಲ್ಲೆಗಳ ವಿಷಯ ಪ್ರಮುಖರ ಪ್ರಶಿಕ್ಷಣ ವರ್ಗ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 1990ರಿಂದ ನಾನು ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಹಲವಾರು ಸಂಕಷ್ಟಗಳ ಮಧ್ಯೆಯೂ ಪಕ್ಷ ಸಂಘಟಿಸಿದ್ದೇವೆ. ಕೆಲ ಸಂದರ್ಭದಲ್ಲಿ ಹಲವಾರು ಮುಖಂಡರ ಮೇಲೆ ಪ್ರಕರಣ ದಾಖಲಾಗಿವೆ. ಆ ವೇಳೆ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿರಲಿಲ್ಲ. ಕಾರ್ಯಕರ್ತರು ಆ ದಿನಗಳಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ. ಆದರೆ, ಅಂದಿನ ಪರಿಸ್ಥಿತಿ ಇಂದಿಲ್ಲ ಎಂದರು.
ಪಕ್ಷದ ಸಕ್ರಿಯ, ನಿಷ್ಠಾವಂತ ಕಾರ್ಯಕರ್ತರಿಗೆ ಬಿಜೆಪಿ ಎಂದಾದರೂ ಉನ್ನತ ಸ್ಥಾನ ನೀಡುತ್ತದೆ ಎನ್ನುವುದಕ್ಕೆ ಈರಣ್ಣ ಕಡಾಡಿ, ಅಶೋಕ ಗಸ್ತಿ ಅವರು ರಾಜ್ಯಸಭಾ ಸದಸ್ಯರಾಗಿದ್ದೇ ಸಾಕ್ಷಿ. ಪಕ್ಷ ಸಂಘಟನೆಯಲ್ಲಿ ತೊಡಗದೆ ದಿಢೀರನೇ ಅಧಿಕಾರ, ಸ್ಥಾನಮಾನ ಬೇಕೆನ್ನುವವರು ಯಶಸ್ವಿಯಾಗುವುದಿಲ್ಲ. ಆದರೆ, ಪ್ರಾಮಾಣಿಕ ಪ್ರಯತ್ನಕ್ಕೆ ಖಂಡಿತ ಬೆಲೆ ಇದೆ ಎಂದರು.
ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ, ನಮ್ಮ ದೇಶದ ಸಂಸ್ಕೃತಿ, ಧರ್ಮ ಉಳಿಸುವ ನಿಟ್ಟಿನಲ್ಲಿ ಈ ಅಭ್ಯಾಸ ವರ್ಗವನ್ನು ಹಮ್ಮಿಕೊಂಡಿದ್ದೇವೆ. ಅದೇ ರೀತಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ನಾವೆಲ್ಲ ಇನ್ನಷ್ಟು ಶ್ರಮಿಸಬೇಕಿದೆ. ಕೇವಲ ಚುನಾವಣೆ ಬಂದಾಗ ಮಾತ್ರ ಧ್ವಜ ಹಿಡಿದುಕೊಂಡು ಏನೇನೋ ಹಂಚಿ ಇಲೆಕ್ಷನ್ ಮಾಡುವ ಕಾರ್ಯಕರ್ತರು ನಾವಲ್ಲ. ದಿನದ 24 ಗಂಟೆಯೂ ನಿರಂತರವಾಗಿ ಕೆಲಸ ಮಾಡುವ ಕಾರ್ಯಕರ್ತರು ನಮ್ಮಲ್ಲಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅನಿಲ ಬೆನಕೆ, ಮಹಾನಗರ ಅಧ್ಯಕ್ಷ ಶಶಿಕಾಂತ ಪಾಟೀಲ ಮಾತನಾಡಿದರು. ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೇರ್ಲಿ ಹಾಗೂ ಬಿಜೆಪಿ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.