

ಗೋಕಾಕ: ಐದು ವರ್ಷಗಳಿಗೊಮ್ಮೆ ಜರುಗುವ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವವನ್ನು ನಾವೆಲ್ಲರೂ ವಿಜಂಭಣೆಯಿಂದ ಆಚರಿಸೋಣ ಎಂದು ಶಾಸಕ ಹಾಗೂ ಜಾತ್ರಾ ಕಮಿಟಿ ಅಧ್ಯಕ್ಷ ರಮೇಶ ಜಾರಕಿಹೊಳಿ ಹೇಳಿದರು.
ನಗರದ ಮಹಾಲಕ್ಷ್ಮೀ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲ ಅಧಿಕಾರಿಗಳು ಪರಸ್ಪರ ಸಭೆ ನಡೆಸುವ ಮೂಲಕ ಜಾತ್ರೆ ಸುವ್ಯವಸ್ಥಿತವಾಗಿ ಜರುಗಲು ಸಿದ್ಧತೆ ಮಾಡಿಕೊಳ್ಳವಂತೆ ತಿಳಿಸಿದರು.
ನಗರಸಭೆಯಿಂದ ರಸ್ತೆಗಳ ದುರಸ್ತಿ, ನೀರು ಸರಬರಾಜು, ಹೆಚ್ಚಿನ ಶೌಚಗೃಹ ಕಲ್ಪಿಸಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಎಲ್ಲ ರೀತಿಯ ಕಾಮಗಾರಿಗಳನ್ನು ಬೇಗ ಪೂರ್ಣಗೊಳಿಸಬೇಕು. ಲಕ್ಷಾಂತರ ಜನರು ಸೇರುವ ಈ ಜಾತ್ರೆಯಲ್ಲಿ ಯಾವುದೇ ಕೊರತೆಯಾಗದಂತೆ ಜಾಗ್ರತೆ ವಹಿಸಬೇಕು. ಆರೋಗ್ಯ ಇಲಾಖೆಯಿಂದ ನಗರದಲ್ಲಿ ಹೆಚ್ಚಿನ ತುರ್ತು ಚಿಕಿತ್ಸಾ ಘಟಕಗಳನ್ನು ಸ್ಥಾಪಿಸಬೇಕು. ಆಂಬುಲೆನ್ಸ್ ಹಾಗೂ ಔಷಧಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಪೊಲೀಸ್ ಇಲಾಖೆ ಕಾನೂನು ಹಾಗೂ ಸುವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಬೇಕು.
ಹೆಸ್ಕಾಂ ಇಲಾಖೆ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು. ಅವಶ್ಯಕ ಸ್ಥಳಗಳಲ್ಲಿ ಹೆಚ್ಚಿನ ವಿದ್ಯುತ್ ದೀಪ ಅಳವಡಿಸಿಕೊಳ್ಳಬೇಕು. ಸಾರಿಗೆ ಇಲಾಖೆ ಟ್ರಾಫಿಕ್ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕು. ಎಪಿಎಂಸಿಯ 20 ಎಕರೆ ಸ್ಥಳವನ್ನು ತಾತ್ಕಾಲಿಕವಾಗಿ ಜಾತ್ರಾ ಕಾರ್ಯಕ್ರಮಕ್ಕೆ ಉಪಯೋಗಿಸಿಕೊಳ್ಳಬಹುದು. ಎಪಿಎಂಸಿ ರಸ್ತೆ ದುರಸ್ತಿ ಮಾಡಬೇಕು ಎಂದು ಸೂಚಿಸಿದರು.
ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ತಹಸೀಲ್ದಾರ್ ಡಾ.ಮೋಹನ ಭಸ್ಮೆ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಘಸ್ತೆ, ಡಿವೈಎಸ್‌ಪಿ ಡಿ.ಎಚ್. ಮುಲ್ಲಾ, ಜಾತ್ರಾ ಕಮಿಟಿ ಸದಸ್ಯರು, ನಗರಸಭಾ ಸದಸ್ಯರು, ತಾಲೂಕುಮಟ್ಟದ ಅಧಿಕಾರಿಗಳು ಇದ್ದರು.