ನಾಲ್ಕನೇ ಬಾರಿಯೂ ‘ಮೋಹನ’ರದೇ ಕಾರುಬಾರು

GKN
Published on

ಗೋಕರ್ಣ: ಇಲ್ಲಿನ ಪ್ರಮುಖ ಹಣಕಾಸು ಸಂಸ್ಥೆಯಾದ ಶ್ರೀ ಮಹಾಬಲೇಶ್ವರ ಸಹಕಾರಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಮೋಹನ ನಾರಾಯಣ ನಾಯಕ ಹಾಗೂ ಉಪಾಧ್ಯಕ್ಷರಾಗಿ ವೆಂಕಟ್ರಮಣ ರಾಮ ಕವರಿ ದೇವರಬಾವಿ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು. ಮೋಹನ ಅವರು ಸತತ ನಾಲ್ಕನೇ ಬಾರಿ ಆಯ್ಕೆಯಾಗಿದ್ದು, ದಾಖಲೆಯಾಗಿದೆ.

ಬ್ಯಾಂಕ್​ನ ಶ್ರೀ ರಾಮಕೃಷ್ಣ ಹೆಗಡೆ ಸ್ಮಾರಕ ಸಭಾಭವನದಲ್ಲಿ ಶುಕ್ರವಾರ ಚುನಾವಣೆ ನಿಗದಿಯಾಗಿತ್ತು. ಎಲ್ಲ 17 ನಿರ್ದೇಶಕರು ಪಾಲ್ಗೊಂಡಿದ್ದರು. ಚುನಾವಣೆಯ ಅಧಿಕಾರಿಯಾಗಿ ಸಹಕಾರಿ ಇಲಾಖೆಯ ಹಿರಿಯ ನಿರೀಕ್ಷಕ ಭಾಸ್ಕರ ಡಿ. ನಾಯ್ಕ ಕಾರ್ಯನಿರ್ವಹಿಸಿದರು.

ನೂತನ ಅಧ್ಯಕ್ಷ ಮೋಹನ ನಾಯಕ ಮಾತನಾಡಿ, ಕಳೆದ ಮೂರು ಅವಧಿಯಲ್ಲಿ ಬ್ಯಾಂಕ್ ಉತ್ತಮ ಲಾಭಾಂಶ ದಾಖಲಿಸಿದೆ. ವರದಿಯ ವರ್ಷದಲ್ಲಿ 1.17 ಕೋಟಿ ರೂ. ಲಾಭಾಂಶ ಬಂದಿರುವುದು ಹೆಮ್ಮೆಯ ಸಂಗತಿ. ಬ್ಯಾಂಕ್ 78 ಕೋಟಿ ರೂ.ಗೂ ಹೆಚ್ಚಿನ ದುಡಿಯುವ ಬಂಡವಾಳ ಹೊಂದಿದೆ. ಒಟ್ಟು ಠೇವು 69.09ಕೋಟಿ ರೂ. ಏರಿಕೆ ಕಂಡಿದೆ. ವಿವಿಧ ಯೋಜನೆಗಳ ಮೂಲಕ ಬ್ಯಾಂಕ್ ಗ್ರಾಹಕರಿಗೆ 50.64 ಕೋಟಿ ರೂ. ಸಾಲ ಒದಗಿಸಿದೆ. ಜತೆಗೆ 5 ಲಕ್ಷ ರೂ. ವರೆಗಿನ ಠೇವಣಿಗೆ ವಿಮಾ ಸೌಲಭ್ಯ, ಗೋ ಸಾಕಣೆ ಪ್ರೋತ್ಸಾಹಕ್ಕೆ 2 ಲಕ್ಷ ರೂ. ಹೊಸ ಯೋಜನೆ, ಬಂಗಾರದ ಮೇಲೆ ಅತಿ ಹೆಚ್ಚಿನ ಅಡವು ಸಾಲದ ವ್ಯವಸ್ಥೆ ಮಾಡಲಾಗಿದೆ. ಬ್ಯಾಂಕ್ ಸದಸ್ಯರಿಗೆ ವೈದ್ಯಕೀಯ ಪರಿಹಾರ ಮತ್ತು ಗ್ರಾಹಕರು ನಿಧನರಾದರೆ ವಾರಸುದಾರರಿಗೆ ವಿಶೇಷ ನೆರವನ್ನು ಪ್ರಾರಂಭಿಸಲಾಗಿದ್ದು, ಇವುಗಳ ಪ್ರಯೋಜನವನ್ನು ಸರ್ವರು ಪಡೆಯುವಂತಾಗಬೇಕು. ಬ್ಯಾಂಕ್ ಇತಿಹಾಸದಲ್ಲಿ ಸತತ ನಾಲ್ಕನೇ ಬಾರಿಗೆ ಅವಿರೋಧವಾಗಿ ಅಧ್ಯಕ್ಷನಾಗಲು ಬೆಂಬಲ ನೀಡಿದ ಎಲ್ಲ ನಿರ್ದೇಶಕರಿಗೆ ಧನ್ಯವಾದ ಹೇಳಿದರು.

ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಆನಂದ ಕಿಶೋರ ಗಾಂವಕರ ಮತ್ತು ಸಿಬ್ಬಂದಿ ನಿರ್ವಹಿಸಿದರು. ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಶ್ರೀ ಶಿವಶಕ್ತಿ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರದೀಪ ನಾಯಕ ದೇವರಬಾವಿ, ತೊರ್ಕೆ ಗ್ರಾಪಂ ಅಧ್ಯಕ್ಷ ಆನಂದ ಕವರಿ, ತಾಪಂ ಮಾಜಿ ಸದಸ್ಯ ಮಹೇಶ ಶೆಟ್ಟಿ, ಉದ್ಯಮಿ ಕಮಲಾಕ್ಷ ಗಾಂವಕರ ಹಿರೇಗುತ್ತಿ, ರಾಮನಾಥ ಕಣಗೀಲ್, ಬ್ಯಾಂಕ್ ನಿರ್ದೇಶಕರು ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net