ಪ್ರಥಮ ಬಾರಿಗೆ ಪ್ರಯಾಗರಾಜ್ ಗಂಗಾ ತೀರದಲ್ಲಿ ‘ಶ್ರೀಸಿದ್ಧಾಂತ ಸಿಖಾಮಣಿ’ ಪಾರಾಯಣ

prayaga
Published on

ಪ್ರಯಾಗರಾಜ(ಉತ್ತರ ಪ್ರದೇಶ): ಇತ್ತೀಚೆಗಷ್ಟೇ ಕುಂಭಮೇಳದಿಂದ ವಿಶ್ವಪ್ರಸಿದ್ಧಿ ಹೊಂದಿದ್ದ ಉತ್ತರಪ್ರದೇಶದ ಪ್ರಯಾಗರಾಜ ಪವಿತ್ರ ತ್ರಿವೇಣಿಸಂಗಮ ಕ್ಷೇತ್ರದ ಗಂಗಾ ತೀರದಲ್ಲಿ ಇದೇ ಮೊದಲ ಬಾರಿಗೆ ವೀರಶೈವ ಧರ್ಮಗ್ರಂಥ ಶ್ರೀಸಿದ್ಧಾಂತ ಶಿಖಾಮಣಿ ಪಾರಾಯಣ ನಡೆಯಿತು.

ಕಾಶೀ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ನಡೆದ ಪಾರಾಯಣದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಬಂದಿದ್ದ ನೂರಾರು ಮಹಿಳೆಯರು ಪಾಲ್ಗೊಂಡು ಪಾರಾಯಣ ಮಾಡಿದರು.

ಸಮಾರಂಭದಲ್ಲಿ ಆಶೀರ್ವಚನ ನೀಡಿದ ಕಾಶೀ ಜಗದ್ಗುರುಗಳು, ಬೆಂಗಳೂರಿನ ಗುರುಮಾತೆ ಇಂದುಕಲಾ ಅವರು ಕಳೆದ ಅನೇಕ ವರ್ಷಗಳಿಂದ ‘ಶ್ರೀಸಿದ್ಧಾಂತ ಶಿಖಾಮಣಿ’ಯ ಪಾರಾಯಣವನ್ನು ಆನ್‌ಲೈನ್ ಮೂಲಕ ಎಲ್ಲ ಪ್ರದೇಶಗಳ ಸಾವಿರಾರು ಮಹಿಳೆಯರಿಗೆ ಕಲಿಸಿದ್ದಾರೆ. ಇದರ ಫಲವಾಗಿ ಒಂದು ವಾರಕಾಲ ಮಾಡಬೇಕಾದ ಪಾರಾಯಣ ಒಂದೇ ದಿನದಲ್ಲಿ ಮಾಡಲು ಸಾಧ್ಯವಾಗಿದ್ದು, ಸನಾತನ ವೀರಶೈವ ಧರ್ಮದ ಮಹಿಳೆಯರು ಹೊಸ ದಾಖಲೆ ಸೃಷ್ಟಿಸಿದ್ದಾರೆ. ಜೊತೆಗೆ ಪ್ರಯಾಗರಾಜ್ ಗಂಗಾ ತೀರದಲ್ಲಿ ಇದೇ ಮೊದಲ ಬಾರಿಗೆ ಶ್ರೀಸಿದ್ಧಾಂತ ಶಿಖಾಮಣಿ ಪಾರಾಯಣ ಮಾಡಿರುವುದೂ ಸಹ ಹೊಸ ದಾಖಲೆಯಾಗಿದೆ ಎಂದರು

ಪ್ರಮಾಣಪತ್ರ ಪ್ರದಾನ: ಕಾಶಿ ಮತ್ತು ಪ್ರಯಾಗರಾಜ್​ನಲ್ಲಿ ನಿರಂತರ ಒಂದು ಸಪ್ತಾಹ ಪಾರಾಯಣ ಮಾಡಿದ ಎಲ್ಲ ಮಹಿಳೆಯರಿಗೆ ಪ್ರಮಾಣಪತ್ರ ಪ್ರದಾನ ಮಾಡಿ ಆಶೀರ್ವದಿಸಿದ ಕಾಶೀ ಜಗದ್ಗುರುಗಳು ತರಬೇತುದಾರರಾದ ಬೆಂಗಳೂರಿನ ಟಿ.ಎಸ್.ಇಂದುಕಲಾ ಅವರಿಗೆ ಗುರುರಕ್ಷೆ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಶ್ರೀಪೀಠದ ಗುರುಕುಲ ಸಾಧಕ ಅಖಿಲೇಶ್ ದೇವರು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net