

ಮಂಡ್ಯ: ನೀರಿನ ಮೂಲವಾಗಿರುವ ಕೆರೆಗಳನ್ನು ಸಂರಕ್ಷಿಸುವ ಉದ್ದೇಶದಿಂದ ಜಿಲ್ಲಾಡಳಿತ ಕೆರೆ ಅಭಿವೃದ್ಧಿ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತಂದಿದೆ.
ಒತ್ತುವರಿಯಾಗಿರುವ ಕೆರೆಗಳನ್ನು ತೆರವುಗೊಳಿಸುವ ಮೂಲಕ ನೀರಿನ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಪ್ರಾಧಿಕಾರ ರಚಿಸಲಾಗಿದೆ. ಇದಕ್ಕೆ ಡಿಸಿ ಅಧ್ಯಕ್ಷರಾಗಿದ್ದು, ಜಿಲ್ಲಾ ಪಂಚಾಯಿತಿ ಸಿಇಒ, ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಎಇಇ, ಬೃಹತ್ ನೀರಾವರಿ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ಸದಸ್ಯರನ್ನಾಗಿ ಮಾಡಲಾಗಿದೆ. ಅಂತೆಯೆ, ಮೊದಲ ಹಂತವಾಗಿ ಒತ್ತುವರಿ ತೆರವುಗೊಳಿಸಲು ಶೀಘ್ರ ಚಾಲನೆ ನೀಡಲಾಗುತ್ತಿದೆ.
ಪ್ರಾಧಿಕಾರದ ಯೋಜನೆಗಳಿವು: ಕೆರೆ ಸರ್ವೇ ಮಾಡಿ ಒತ್ತುವರಿ ತೆರವುಗೊಳಿಸಿದ ಬಳಿಕ ಅಲ್ಲಿ ಟ್ರಂಚ್ ಹಾಕಿಸಬೇಕಿದೆ. ಬಳಿಕ ಸುತ್ತಲೂ ಗಿಡ ನೆಟ್ಟು ಬೆಳೆಸುವುದರಿಂದ ಒತ್ತುವರಿಗೆ ಅವಕಾಶವಿಲ್ಲದಂತೆ ಮಾಡುವುದು ಯೋಜನೆಯ ಪ್ರಮುಖ ಉದ್ದೇಶ.
ಹೂಳನ್ನು ಸಂಪೂರ್ಣವಾಗಿ ತೆಗೆಸಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸುವ ಮೂಲಕ ಅಂತರ್ಜಲದ ಮಟ್ಟವನ್ನು ವೃದ್ಧಿಸಲು ಆದ್ಯತೆ ನೀಡುವುದು ಯೋಜನೆಯ ಮತ್ತೊಂದು ಉದ್ದೇಶ. ಹೀಗಾಗಿ ನರೇಗಾ, ಲಿಂಕ್ ಡಾಕ್ಯುಮೆಂಟ್ ಮತ್ತು ಕೆರೆ ಸಂಜೀವಿನಿಯಡಿ ದೊರೆಯಬಹುದಾದ ಅನುದಾನವನ್ನು ಬಳಸಿಕೊಂಡು ಕೆರೆಗಳನ್ನು ಅಭಿವೃದ್ಧಿಪಡಿಸುವ ಚಿಂತನೆ ನಡೆದಿದೆ.
ತಾಲೂಕು ಮಟ್ಟದಲ್ಲಿ ತಹಸೀಲ್ದಾರ್, ಗ್ರಾಪಂ ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು ಕೆರೆ ಒತ್ತುವರಿಯಾಗದಂತೆ ನಿಗಾ ವಹಿಸಲಿದ್ದು, ಕಾನೂನು ಮೀರಿ ಒತ್ತುವರಿ ಮಾಡಿದರೆ ಕ್ರಮ ತೆಗೆದುಕೊಳ್ಳಲಿದ್ದಾರೆ.
ಮಳೆ ನೀರು ಕೆರೆಗೆ ಸೇರಬೇಕಿದ್ದು, ಇದರ ಮೂಲಕ ಹಾಳಾಗಿರುವುದರಿಂದ, ಅದನ್ನು ಗುರುತಿಸಿ ಅಭಿವೃದ್ಧಿಪಡಿಸಬೇಕು ಎಂಬುದು ಪ್ರಾಧಿಕಾರದ ಧ್ಯೇಯ. ಜತೆಗೆ ನೀರು ಶುದ್ಧವಾಗಿರುವಂತೆ ನೋಡಿಕೊಳ್ಳುವ ಮೂಲಕ ಜನ, ಜಾನುವಾರಿಗಳಿಗೆ ಯೋಗ್ಯವಾದ ಕುಡಿವ ನೀರನ್ನು ಪೂರೈಕೆ ಮಾಡಬೇಕೆಂಬುದು ಮತ್ತೊಂದು ಉದ್ದೇಶ. ಆ ಮೂಲಕ ನೀರಿನ ಸಮಸ್ಯೆ ಕಡಿಮೆ ಮಾಡುವುದು ಪ್ರಾಧಿಕಾರದ ಮುಂದಿರುವ ಸವಾಲು.
ಬಹುತೇಕ ಕೆರೆ ಒತ್ತುವರಿ: ಅಧಿಕಾರಿಗಳ ಪ್ರಕಾರ ಜಿಲ್ಲೆಯ ಬಹುತೇಕ ಕೆರೆಗಳು ಒತ್ತುವರಿಯಾಗಿದೆ. ಬಲಾಢ್ಯರೇ ಹೆಚ್ಚಿನ ಪ್ರಮಾಣ ದಲ್ಲಿ ಒತ್ತುವರಿ ಮಾಡಿಕೊಂಡಿದ್ದಾರೆ. ನಕಲಿ ದಾಖಲೆ ಮೂಲಕ ಕೆರೆಯ ಒಡಲನ್ನು ವಶಪಡಿಕೊಂಡಿದ್ದು, ಇದಕ್ಕೆ ಶೀಘ್ರವೇ ಉತ್ತರ ಕೊಡಬೇಕಿದೆ.
ನೀರಿನ ಸಂರಕ್ಷಣೆಯಲ್ಲಿ ಜೀವಾಳದಂತಿರುವ ಕೆರೆ, ಕಟ್ಟೆಗಳು ನಾಶವಾಗುತ್ತಿರುವುದರಿಂದ ಹಸಿರಿನಿಂದ ಕಂಗೊಳಿಸುತ್ತಿದ್ದ ಜಿಲ್ಲೆ ಒಣ ಭೂಮಿಯಾಗಿ ಬದಲಾಗುತ್ತಿದೆ. ಅದರಲ್ಲಿಯೂ ಕೆಲ ವರ್ಷದಿಂದ ನಿರೀಕ್ಷಿತ ಪ್ರಮಾಣದ ಮಳೆಯಾಗದೆ ಜನರು ತತ್ತರಿಸಿ ಹೋಗಿದ್ದಾರೆ. ಕಳೆದ ವರ್ಷ ಉತ್ತಮ ಮಳೆಯಾದ ಪರಿಣಾಮ ಕೆಲ ಕೆರೆಗಳು ಭರ್ತಿಯಾಗಿವೆ. ಆದರೆ, ಒತ್ತುವರಿ ಇಲ್ಲದಿದ್ದರೆ ಮತ್ತು ಉತ್ತಮ ಸ್ಥಿತಿಯಲ್ಲಿದ್ದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಶೇಖರಣೆಯಾಗುತ್ತಿತ್ತು.
ಜಿಲ್ಲೆಯಲ್ಲಿ ಒಂದು ಬಾರಿ ಮಳೆ ಕೈಕೊಟ್ಟರೂ ಅದನ್ನು ಎದುರಿಸುವುದು ದೊಡ್ಡ ಸವಾಲಿನ ಕೆಲಸ. ಕೆಆರ್‌ಎಸ್ ಅಣೆಕಟ್ಟೆಯಲ್ಲಿ ನೀರಿದ್ದರೂ ಅದನ್ನು ಬಿಡಿಸಿಕೊಳ್ಳಬೇಕಾದರೆ ಪ್ರಾಧಿಕಾರದ ಅನುಮತಿ ಪಡೆಯಬೇಕಾದ ಸ್ಥಿತಿ ಇದೆ. ಆ ಸಮಯದಲ್ಲಿ ನೀರಿಗಾಗಿ ಹೋರಾಟ, ಚಳವಳಿ ನಡೆಸುವುದು ಸಾಮಾನ್ಯ. ಹೆಚ್ಚುವರಿ ನೀರು ದೊರಕಿದ ಸಮಯದಲ್ಲಿ ಅದನ್ನು ಸಮರ್ಥವಾಗಿ ಹಿಡಿದಿಡುವುದಕ್ಕೆ ರಾಜ್ಯ ಸರ್ಕಾರ ಯಾವುದೇ ಯೋಜನೆ ರೂಪಿಸದಿರುವುದು ಬೇಸರದ ಸಂಗತಿ.
ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತ ಕೆರೆ ಸಂರಕ್ಷಣೆಗೆ ಟೊಂಕ ಕಟ್ಟಿ ನಿಂತಿದೆ. ಇದಕ್ಕೆ ಸಾರ್ವಜನಿಕರು ಸಹಕರಿಸಿದರೆ ನೀರಿನ ಸಮಸ್ಯೆ ಬಗೆಹರಿಯುವುದರ ಜತೆಗೆ ಹಸಿರಿನ ಮಂಡ್ಯವನ್ನು ಕಾಣಲು ಸಾಧ್ಯವಾಗುತ್ತದೆ.
12 ಕೆರೆ ಸಂರಕ್ಷಿಸಿದ್ದ ಅಧಿಕಾರಿ
ಈ ಹಿಂದೆ ಮಂಡ್ಯ ತಾಲೂಕು ತಹಸೀಲ್ದಾರ್ ಆಗಿದ್ದ ಮಾರುತಿಪ್ರಸನ್ನ ಅವರು ಜನರ ಮನವೊಲಿಸಿ 12 ಕೆರೆಗಳನ್ನು ಪುನಶ್ಚೇತನಗೊಳಿಸಿದ್ದರು. ಪ್ರಾರಂಭದಲ್ಲಿ ಜನರ ವಿರೋಧ ವ್ಯಕ್ತವಾದರೂ ಬಳಿಕ ಅವರೊಂದಿಗೆ ಮಾತನಾಡಿ ನೀರಿನ ಸಂರಕ್ಷಣೆಯಲ್ಲಿ ಕೆರೆಗಳ ಪಾತ್ರ ಕುರಿತು ಜಾಗೃತಿ ಮೂಡಿಸಿದ್ದರು. ಪರಿಣಾಮ, ಜನರೇ ಸ್ವಯಂಪ್ರೇರಿತರಾಗಿ ಒತ್ತುವರಿ ತೆರವು ಮಾಡಲು ಅವಕಾಶ ಮಾಡಿಕೊಡುವುದರ ಜತೆಗೆ ಒಟ್ಟಾಗಿ ಹೂಳೆತ್ತಿಸಿ ಕೆರೆಯನ್ನು ರಕ್ಷಣೆ ಮಾಡಿದ್ದರು. ಇದರಿಂದಾಗಿ ಸಾವಿರಾರು ಎಕರೆ ಪ್ರದೇಶಕ್ಕೆ ನೀರುಣಿಸಲಾಗಿತ್ತು. ಅಂದು ಅಧಿಕಾರಿಯ ಕಾರ್ಯ ಸಾಕಷ್ಟು ಪ್ರಶಂಸೆಗೊಳಪಟ್ಟಿತ್ತು.
ಜಿಲ್ಲೆಯ ಕೆರೆಗಳನ್ನು ರಕ್ಷಣೆ ಮಾಡುವ ಉದ್ದೇಶದೊಂದಿಗೆ ಕೆರೆ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ. ಮೊದಲ ಹಂತದಲ್ಲಿ ಒತ್ತುವರಿ ತೆರವುಗೊಳಿಸುವುದರ ಜತೆಗೆ ಮತ್ತೆ ಅಲ್ಲಿ ಒತ್ತುವರಿಯಾಗದಂತೆ ಕ್ರಮ ವಹಿಸಲಾಗುವುದು. ಯಾವ ಪ್ರಭಾವಿ ಕೆರೆ ಒತ್ತುವರಿ ಮಾಡಿಕೊಂಡಿದ್ದರೂ ತೆರವುಗೊಳಿಸುವುದು ಖಚಿತ.
ಡಾ.ಎಂ.ವಿ.ವೆಂಕಟೇಶ್,
ಜಿಲ್ಲಾಧಿಕಾರಿ, ಮಂಡ್ಯ