ಕೆಎಸ್‌ಎಫ್​ಎಫ್ ರೈತರ ವೇದಿಕೆ ಅಸ್ತಿತ್ವಕ್ಕೆ

farmers forum
Published on

ಬೆಂಗಳೂರು: ರಾಜ್ಯದಲ್ಲಿ ಅನ್ನದಾತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಸರ್ಕಾರ ಹಾಗೂ ಸಮುದಾಯದಿಂದ ಪರಿಹಾರ ಒದಗಿಸುವ ಭರವಸೆಯೊಂದಿಗೆ ಹೊಸದಾಗಿ ‘ಕರ್ನಾಟಕ ರಾಜ್ಯ ರೈತರ ವೇದಿಕೆ’ (ಕರ್ನಾಟಕ ಸ್ಟೇಟ್ ಫಾರ್ಮರ್ಸ್‌ ಫೋರಂ - ಕೆಎಸ್‌ಎಫ್​ಎಫ್​) ಮಂಗಳವಾರ ಅಸ್ತಿತ್ವಕ್ಕೆ ಬಂದಿದೆ.

ನಗರದಲ್ಲಿ ನಡೆದ ವೇದಿಕೆಯ ಪ್ರಥಮ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಸಿ.ವಿ.ಲೋಕೇಶ್‌ಗೌಡ, ಪ್ರಸ್ತುತ ರೈತರು ವಿವಿಧ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಭಾರೀ ತೊಂದರೆಗೆ ಒಳಗಾಗಿದ್ದಾರೆ. ಅದರಲ್ಲೂ ಬಡ ರೈತರಿಗೆ ಸರ್ಕಾರದಿಂದ ಸಿಗಬೇಕಿದ್ದ ಸವಲತ್ತು ಸಿಗದೆ ಸಣ್ಣ ರೈತರು ಕೃಷಿಯಿಂದ ವಿಮುಕ್ತರಾಗುವ ಹಂತ ತಲುಪಿದ್ದಾರೆ. ಇಂತಹ ಜ್ವಲಂತ ಸಮಸ್ಯೆಗಳನ್ನು ಮುಂದಿಟ್ಟು ಹೋರಾಟದ ಮೂಲಕ ಕೃಷಿಕರಿಗೆ ನೆರವಾಗಲು ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದರು.

ರೈತರು ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳದೆ ತಮ್ಮ ವ್ಯವಸಾಯ ವೃತ್ತಿಯಲ್ಲೇ ಸಾಗುತ್ತಿದ್ದಾರೆ. ಇವರಿಗೆ ಮಾರ್ಗದರ್ಶನ ಮಾಡಲು ರೈತ ಸಂಘಟನೆಗಳು ಪೂರ್ಣವಾಗಿ ಸಲವಾಗಿಲ್ಲ. ಸರ್ಕಾರ ಕೂಡ ರೈತರ ಆಶೋತ್ತರಗಳನ್ನು ಈಡೇರಿಸಲು ಬದ್ಧತೆ ಹೊಂದಿಲ್ಲ. ಎಷ್ಟೇ ಹೋರಾಟ ಮಾಡಿದರೂ, ಕ್ಯಾರೇ ಎನ್ನದ ಪರಿಸ್ಥಿತಿ ಕಾಣಸಿಗುತ್ತಿದೆ. ಈ ಸ್ಥಿತಿಯಿಂದ ಹೊರಬಂದು ರೈತರ ಹಕ್ಕುಗಳನ್ನು ಸಂರಕ್ಷಿಸಲು ವೇದಿಕೆಯಿಂದ ಎಲ್ಲ ತಾಲೂಕುಗಳಲ್ಲಿ ಕೃಷಿಕರನ್ನು ಸಂಘಟಿಸಲಾಗುವುದು ಎಂದು ಪ್ರಕಟಿಸಿದರು.

ಪರಿಹಾರ ಬಿಡುಗಡೆ ಆಗ್ರಹ:

ತುಂಗಭದ್ರಾ ಡ್ಯಾಂ ಗೇಟ್ ಕಳಜಿ ಜಲಾಶಯದಿಂದ ಅಪಾರ ಪ್ರಮಾನದ ನೀರು ನದಿ ಮೂಲಕ ವ್ಯರ್ಥವಾಗಿ ಹರಿದುಹೋಗಿದೆ. ಈ ನೀರು ಅಣೆಕಟ್ಟೆಯ ಕೆಳಗಿರುವ ರೈತರ ಹೊಲ-ತೋಟಕ್ಕೆ ನುಗ್ಗಿ ದೊಡ್ಡ ಪ್ರಮಾಣದ ನಷ್ಟವಾಗಿದೆ. ಸಾವಿರಾರು ರೈತರ ವಾರ್ಷಿಕ ಆದಾಯ ಡ್ಯಾಂನಿಂದ ಹರಿಬಿಟ್ಟ ನೀರಿನಿಂದ ಕೊಚ್ಚಿಹೋಗಿದೆ. ಹಾಗಾಗಿ ಅಂತಹ ಕೃಷಿಕರಿಗೆ ಸರ್ಕಾರ ತಕ್ಷಣವೇ ಪರಿಹಾರವನ್ನು ಬಿಡುಗಡೆ ಮಾಡಬೇಕು ಎಂದು ಲೋಕೇಶ್‌ಗೌಡ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net