

ಶಿವಮೊಗ್ಗ: ಹೊಸ ಉದ್ಯೋಗ ಅವಕಾಶ ಸೃಷ್ಟಿಸುವುದು ಸೇರಿದಂತೆ ಉದ್ಯಮ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ನವೀನ ಪರಿಹಾರ ಒದಗಿಸುವುದು ಅನ್ವೇಷಣಾ ಇನ್ನೋವೇಶನ್ ಮತ್ತು ಎಂಟ್ರೆಪ್ರೆನ್ಯೂರಿಯಲ್ ೋರಂನ ಗುರಿಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಪೆಸೆಟ್ ಕಾಲೇಜಿನಲ್ಲಿ ಪೆಸೆಟ್ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಅನ್ವೇಷಣಾ ಇನ್ನೋವೇಶನ್ ಮತ್ತು ಎಂಟ್ರೆಪ್ರೆನ್ಯೂರಿಯಲ್ ೋರಂ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಇದು ತಂತ್ರಜ್ಞಾನದ ಯುಗ. ಹಾಗಾಗಿ ತಂತ್ರಜ್ಞಾನದ ಲಾಭ ಎಲ್ಲರಿಗೂ ಸಿಗಬೇಕು. ಈ ಹಿನ್ನೆಲೆಯಲ್ಲಿ ಈ ಫೋರಂ ಕೆಲಸ ಮಾಡಲಿದೆ. ಅಲ್ಲದೇ ಮಲೆನಾಡು ಪ್ರದೇಶದಲ್ಲಿ ವಾಣಿಜ್ಯೋದ್ಯಮವನ್ನು ಪೋಷಿಸಲು ಈ ಸಂಸ್ಥೆ ನೆರವಾಗಲಿದೆ. ಹೊಸದಾಗಿ ಉದ್ಯಮ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುವವರಿಗೆ ಹೊಸ ಶಕ್ತಿ ಮತ್ತು ಭರವಸೆ ತುಂಬಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ವಿಟಿಯು ಕುಲಪತಿ ಡಾ. ಎಸ್.ವಿದ್ಯಾಶಂಕರ್ ಮಾತನಾಡಿ, ಪ್ರತಿ ಉದ್ಯಮಿಗೂ ಕೇವಲ ಕನಸು ಇದ್ದರೆ ಸಾಲದು. ಅದನ್ನು ಸಾಧಿಸುವ ಗುರಿಯೂ ಇರಬೇಕು. ಕನಸು ಕಂಡರೆ ಯಾವುದೂ ಸಾಕಾರವಾಗುವುದಿಲ್ಲ. ಅದನ್ನು ಇಡೇರಿಸುವ ನಿಟ್ಟಿನಲ್ಲಿ ಕಾರ್ಯತತ್ಪರರಾಗಬೇಕು. ಕನಸು ಕಾಣು, ಕರ್ತವ್ಯ ನಿಷ್ಠನಾಗು, ಕಾದುನೋಡು ಎಂಬ ಮಾತನ್ನು ಯಾರೂ ಮರೆಯಬಾರದು. ಯಾವುದೇ ಉದ್ಯಮಿ ಸಾಧನೆ ಮಾಡಿದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.
ವಿಷನ್ ಸ್ಟಾರ್ಟಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಸಿ.ಎಂ.ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್. ಅರುಣ್ ಇದ್ದರು. ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ಏಂಜೆಲ್ ಹೂಡಿಕೆದಾರರು, ಮಾರ್ಗದರ್ಶಕರು, ಉದ್ಯಮ ತಜ್ಞರು, 50ಕ್ಕೂ ಹೆಚ್ಚು ಸ್ಥಳೀಯ ಪರಿಸರ ವ್ಯವಸ್ಥೆ ಬೆಂಬಲಿಸುವ ಸಣ್ಣ ವ್ಯಾಪಾರ ಸಂಸ್ಥೆಗಳ ಮಾಲೀಕರು, 150ಕ್ಕೂ ಹೆಚ್ಚು ಸ್ಟಾರ್ಟಪ್‌ಗಳು, 250ಕ್ಕೂ ಹೆಚ್ಚು ಆರಂಭಿಕ ಆಕಾಂಕ್ಷಿಗಳು, ಉದಯೋನ್ಮುಖ ಉದ್ಯಮಿಗಳು ಭಾಗಿಯಾಗಿದ್ದರು. 20ಕ್ಕೂ ಹೆಚ್ಚು ಸ್ಟಾರ್ಟಪ್‌ಗಳಿಂದ ನಾವಿನ್ಯತೆ ಪ್ರದರ್ಶನ. ವಿವಿಧ ವಿಷಯಾಧಾರಿತ ಸೈನ್, ಸ್ಟಾರ್ಟಪ್‌ಗಳಿಂದ ಉತ್ಪನ್ನ ಪ್ರದರ್ಶನ ಏರ್ಪಡಿಸಲಾಗಿತ್ತು.