

ನಿಪ್ಪಾಣಿ: ನಮ್ಮ ತಂದೆ ದಿ.ಬಿ.ಆರ್.ಪಾಟೀಲ ಅವರ ಸಾಮಾಜಿಕ ಸೇವೆ ಮುಂದುವರಿಸುತ್ತೇವೆ. ಹೀಗಾಗಿ, ಬಡಮಕ್ಕಳ ಶಿಕ್ಷಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ವಿದ್ಯಾ ಸಂವರ್ಧಕ ಮಂಡಳದ ಉಪಾಧ್ಯಕ್ಷ ಸುನೀಲ ಪಾಟೀಲ ಹೇಳಿದರು.
ಸ್ಥಳೀಯ ವಿಎಸ್‌ಎಂ ಹಿರಿಯ ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳ ಬಡ ವಿದ್ಯಾರ್ಥಿಗಳಿಗೆ ಸೋಮವಾರ ಸಮವಸ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, 9ನೆಯ ತರಗತಿಯಲ್ಲಿದ್ದಾಗಲೇ ಕನ್ನಡಪರ ಹೋರಾಟಗಾರರಾಗಿ ಗಡಿಭಾಗದಲ್ಲಿ ಗುರುತಿಸಿಕೊಂಡ ದಿ.ಬಿ.ಆರ್.ಪಾಟೀಲ ನಿರಂತರವಾಗಿ ಕನ್ನಡ ಉಳಿವಿಗೆ ಶ್ರಮಿಸಿದ್ದಾರೆ. ವಿದ್ಯಾರ್ಥಿಗಳು ಮಾತೃಭಾಷೆ ಪ್ರೀತಿಸುವ ಜತೆಗೆ ಮಂಡಳ ಸೌಲಭ್ಯ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಮಂಡಳದ ಮಾಜಿ ಅಧ್ಯಕ್ಷ ದಿ.ಬಿ.ಆರ್.ಪಾಟೀಲ ಹಾಗೂ ಮಾಜಿ ಸಂಚಾಲಕ ದಿ.ವಿನಾಯಕ ಢೋಲೆ ಸ್ಮರಣಾರ್ಥ 68 ಬಡ ವಿದ್ಯಾರ್ಥಿಗಳಿಗೆ ಸಮವಸ ವಿತರಿಸಲಾಯಿತು.
ಮಂಡಳದ ಚೇರ್ಮನ್ ಚಂದ್ರಕಾಂತ ಕೋಠಿವಾಲೆ, ವೈಸ್ ಚೇರ್ಮನ್ ಪಪ್ಪು ಪಾಟೀಲ, ಕಾರ್ಯದರ್ಶಿ ಸಮೀರ ಬಾಗೇವಾಡಿ, ಸಂಚಾಲಕ ಸಚಿನ ಹಾಲಪ್ಪನವರ, ಸಿಇಒ ಡಾ.ಸಿದ್ಧಗೌಡ ಪಾಟೀಲ, ಪ್ರಾಚಾರ್ಯ ಡಾ.ನಿಂಗಪ್ಪ ಮಾದಣ್ಣವರ, ಡಾ.ಸಮೀರಾ ಬಾಗೇವಾಡಿ, ಪ್ರಕಾಶ ಐನಾಪುರೆ, ಯಲ್ಲಪ್ಪ ಹಂಡಿ, ಜ್ಞಾನದೇವ ನಾಯಿಕ ಇತರರಿದ್ದರು.