

ಅಥಣಿ ಗ್ರಾಮೀಣ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸುವಲ್ಲಿ ವಸತಿನಿಲಯಗಳು ಸಹಕಾರಿಯಾಗಿವೆ ಎಂದು ಕೆಪಿಸಿಸಿ ಸದಸ್ಯ ಶಾಮರಾವ ಪೂಜಾರಿ ಹೇಳಿದರು.
ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಲೋಕೋಪಯೋಗಿ ಇಲಾಖೆಯಿಂದ 2.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕರ ವಸತಿನಿಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿರಬೇಕು. ನಿರಂತರ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮಹಾತ್ಮರ ಆದರ್ಶ ರೂಢಿಸಿಕೊಂಡು ಸಾಧನೆ ಮಾಡಬೇಕು ಎಂದು ತಿಳಿಸಿದರು.
ಬಿಸಿಎಂ ವಿಸ್ತರಣಾಧಿಕಾರಿ ವೆಂಕಟೇಶ ಕುಲಕರ್ಣಿ ಮಾತನಾಡಿ, ಮಕ್ಕಳ ವಸತಿಗಾಗಿ ಸರ್ಕಾರ ಹಲವಾರು ಸೌಲಭ್ಯ ನೀಡಿದೆ. ವಿದ್ಯಾರ್ಥಿಗಳು ಹಾಸ್ಟೆಲ್ ಸದುಪಯೋಗಪಡೆದುಕೊಳ್ಳಬೇಕು. ವಸತಿನಿಲಯದಲ್ಲಿ ಏನೆ ಸಮಸ್ಯೆಯಿದ್ದರೂ ನಮ್ಮ ಗಮನಕ್ಕೆ ತರಬೇಕು ಎಂದರು.
ಮುಖಂಡ ಸುಭಾಷ ಸೋನಕರ ಮಾತನಾಡಿ, ವಸತಿನಿಲಯದಲ್ಲಿರುವ ವಿದ್ಯಾರ್ಥಿಗಳು ಸಾಮರಸ್ಯದಿಂದ ಬದುಕಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾನವ್ವ ಪೂಜಾರಿ ವಸತಿನಿಲಯವನ್ನು ಉದ್ಘಾಟಿಸಿದರು. ಗ್ರಾಪಂ ಉಪಾಧ್ಯಕ್ಷ ಅರ್ಜುನ ಪೂಜಾರಿ, ಮುಖಂಡರಾದ ಮಲ್ಲಿಕಾರ್ಜುನ ಪರಾಂಡೆ, ಮುತ್ತಪ್ಪ ಕಾಡದೇವರಮಠ, ಅನಿಲ ಮುಳಿಕ, ಶ್ರೀಶೈಲ ದೊಡಮನಿ, ಮಹಾದೇವ ಡಂಗಿ, ಪ್ರವಿಣ ತುಬಚಿ, ಗೂಳಪ್ಪ ಪೂಜಾರಿ, ಪ್ರಶಾಂತ ತಳಕೇರಿ, ದುಂಡಪ್ಪ ಬಳೋಲದಾರ, ಮಹೇಶ ಕಾಡದೇವರಮಠ, ಬಿ.ಆರ್.ಯಲ್ಲಟ್ಟಿ, ಅಶೋಕ ಆಜೂರ, ಅಪ್ಪು ನಾಯಿಕ, ಸತೀಶ ದೊಡಮನಿ ಇತರರಿದ್ದರು.