

ಬೆಳಗಾವಿ: ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದ ಬಸ್ ನಿಲ್ದಾಣದ ಪುಟ್‌ಪಾತ್ ಮೇಲಿರುವ ಗೂಡಂಗಡಿಗಳನ್ನು ರಸ್ತೆ ಅಗಲೀಕರಣ ನೆಪದಲ್ಲಿ ಪುರಸಭೆ ಸಿಬ್ಬಂದಿ ತೆರವುಗೊಳಿಸಿದ್ದು, ಚರ್ಮಕಾರರಿಗೆ ಅಲ್ಲಿಯೇ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ಚರ್ಮಕಾರ ಮಹಾ ಸಭಾದ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಮೂಲಕ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಮನವಿ ಸಲ್ಲಿಸಿದರು.
ತಾಳಿಕೋಟೆ ಪಟ್ಟಣದ ಬಸ್ ನಿಲ್ದಾಣದ ಬಳಿಯಿರುವ ರಸ್ತೆಯ ಅಗಲೀಕರಣ ನೆಪದಲ್ಲಿ ಪುಟ್‌ಪಾತ್ ಮೇಲಿದ್ದ ಹರಳಯ್ಯ ಸಮಾಜದ ಸಮಗಾರರ ಗೂಡಂಗಡಿಗಳನ್ನು ಮುನ್ಸೂಚನೆ ನೀಡದೆ ಹೈಕೋರ್ಟ್ ಆದೇಶ ಉಲ್ಲಂಸಿ ತೆರವುಗೊಳಿಸಿ ಪರಿಶಿಷ್ಟ ಜಾತಿ ಬಡ ಕುಟುಂಬಗಳನ್ನು ಬೀದಿಗೆ ತರಲಾಗಿದೆ. ಕೂಡಲೇ ಬೀದಿ ಬದಿಯ ಪಾದರಕ್ಷೆ ದುರಸ್ತಿಗಾರರಿಗೆ ಪರ್ಯಾಯ ವ್ಯವಸ್ಥೆ ಮಾಡಿ, ತೆರವು ಮಾಡಿದ ಅಂಗಡಿಗಳನ್ನು ಮರು ಸ್ಥಾಪಿಸಿ, ಬಡ ಜನರಿಗೆ ನೆರವು ಮಾಡಿಕೊಡಬೇಕೆಂದು ಮನವಿ ಮೂಲಕ ಒತ್ತಾಯಿಸಿದರು.
ಭೀಮರಾವ ಪವಾರ, ಹೀರಾಲಾಲ್ ಚೌವ್ಹಾಣ, ಸಂಜೀವ ಲೋಕಾಪುರ, ಶಿವರಾಜ ಸೌದಾಗರ, ಸಂಜಯ ಚೌಗಲಾ, ಸಂತೋಷ ಹೊಂಗಲ ಇತರರಿದ್ದರು.