ಸಮಾಜಕ್ಕಾಗಿ ಬದುಕು ಮೀಸಲಿಟ್ಟ ಶ್ರೀಗಳು

11Karanjimath
ಬೆಳಗಾವಿ ಕೆಎಲ್‌ಇ ಡಾ.ಬಿ.ಎಸ್.ಜೀರಗೆ ಸಭಾಭವನದಲ್ಲಿ ಕಾರಂಜಿಮಠ ಗುರುಸಿದ್ಧ ಸ್ವಾಮೀಜಿ ಅವರನ್ನು ಅಮೃತ ಮಹೋತ್ಸವದಲ್ಲಿ ಸನ್ಮಾನ ಮಾಡಲಾಯಿತು. ಡಾ.ತೋಂಟದ ಸಿದ್ದರಾಮ ಸ್ವಾಮೀಜಿ, ಡಾ.ಪ್ರಭಾಕರ ಕೋರೆ, ಮಹಾಂತೇಶ ಕವಟಗಿಮಠ, ಲಕ್ಷ್ಮೀ ಹೆಬ್ಬಾಳ್ಕರ್ ಇತರರಿದ್ದರು.
Published on

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕಾರಂಜಿ ಮಠದ ಶ್ರೀಗಳು ಸಲ್ಲಿಸಿದ ಸೇವೆ ಸ್ಮರಣೀಯವಾಗಿದೆ. ಜನಪರ ಕಾರ್ಯಕ್ರಮಗಳಿಗೆ ಸದಾ ಮುಂದಿರುವ ಅವರ ಸೇವೆ ಅದ್ವಿತೀಯವಾಗಿದೆ ಎಂದು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ನಗರದ ಕೆಎಲ್‌ಇ ಸಂಸ್ಥೆಯ ಜೆಎನ್‌ಎಂಸಿ ಆವರಣದಲ್ಲಿರುವ ಡಾ.ಬಿ.ಎಸ್. ಜೀರಗೆ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರಂಜಿಮಠ ಗುರುಸಿದ್ಧ ಸ್ವಾಮೀಜಿ ಅವರ ಅಮೃತ ಮಹೋತ್ಸವ ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು.

ಸಮಾಜದಲ್ಲಿನ ಎಲ್ಲ ಕ್ಷೇತ್ರಗಳ ಪ್ರತಿಭಾವಂತರನ್ನು ಗುರುತಿಸಿ ಅವರನ್ನು ಕರೆಸಿ, ಗೌರವಿಸಿ ಸತ್ಕರಿಸಿ ಅವರಿಂದ ಹೆಚ್ಚಿನ ಸೇವೆ ಸಮಾಜಕ್ಕೆ ಸಿಗುವಂತೆ ಮಾಡಿದವರು ಶ್ರೀಗಳು. ಅಪಾರ ಕಷ್ಟ ನಷ್ಟಗಳನ್ನು ಸಹಿಸಿಕೊಂಡು ಬೆಳೆದು ಸಮಾಜಕ್ಕಾಗಿ ಮತ್ತು ಜನರಿಗಾಗಿ ಏನೆಲ್ಲವನ್ನು ಮಾಡಿದರು. ತಮಗಾಗಿ ಅವರು ಏನನ್ನೂ ಮಾಡಲಿಲ್ಲ. ಪರೋಪಕಾರಿ ಸ್ವಾಮಿಯಾಗಿ ಜನಪ್ರಿಯರಾದರು. ಇಂಥವರನ್ನು ಸಮಾಜ ಕೃತಜ್ಞತೆಯಿಂದ ಸ್ಮರಿಸಿಕೊಳ್ಳುವುದು ನಮ್ಮ ಕರ್ತವ್ಯ. ಇಂದಿಗೂ ಹಲವು ದಶಕಗಳಿಂದ ಅನುಭವದ ಸುಧೆಯನ್ನು ನಿರಂತರವಾಗಿ ಹಂಚಿಕೊಂಡು ಬಂದವರು. ಪ್ರೀತಿ ವಿಶ್ವಾಸಕ್ಕೆ ಧರ್ಮ ಎಂದೂ ಅಡ್ಡಿಯಾಗಲಾರದು ಎಂಬುವುದನ್ನು ನಡೆ ಮತ್ತು ನುಡಿಯ ಮೂಲಕ ತೋರಿದವರು ಎಂದು ಹೇಳಿದರು.

ಹುಕ್ಕೇರಿಯ ಗುರು ಶಾಂತೇಶ್ವರ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗುರುಸಿದ್ಧ ಸ್ವಾಮೀಜಿ ಮಾನವ ಧರ್ಮ ತತ್ತ್ವ ಬಿತ್ತಿದ ಅಪರೂಪದ ಸ್ವಾಮೀಜಿ. ಕಾರಂಜಿಯಂತೆ ಎಲ್ಲರನ್ನು ಒಂದುಗೂಡಿಸಿ ಎಲ್ಲರೊಳಗೆ ಒಂದಾದವರು ಎಂದು ಬಣ್ಣಿಸಿದರು. ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ.ಅಲ್ಲಮಪ್ರಭು ಸ್ವಾಮೀಜಿ, ನಿಲಜಿಯ ಅಲೌಕಿಕ ಧ್ಯಾನ ಮಂದಿರದ ಶಿವಾನಂದ ಗುರೂಜಿ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಆರ್‌ಎಸ್‌ಎಸ್ ಪ್ರಚಾರಕ ರಾಘವೇಂದ್ರ ಕಾಗವಾಡ, ಗಂಗಾ ಮಾತಾಜಿ, ಕಾರಂಜಿ ಮಠದ ಡಾ.ಶಿವಯೋಗಿ ದೇವರು, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕ ಆಸೀಫ್ ಸೇಠ್, ಮಾಜಿ ಶಾಸಕರಾದ ರಮೇಶ ಕುಡಚಿ, ಸಂಜಯ ಪಾಟೀಲ, ಅನಿಲ ಬೆನಕೆ, ಫಿರೋಜ್ ಸೇಠ್, ವೀರಶೈವ ಮಹಾಸಭೆಯ ಜಿಲ್ಲಾಧ್ಯಕ್ಷ ರತ್ನಪ್ರಭಾ ಬೆಲ್ಲದ, ಪಾಲಿಕೆ ಮಾಜಿ ಸದಸ್ಯೆ ಸರಳಾ ಹೇರೇಕರ್, ಶಂಕರಗೌಡ ಪಾಟೀಲ, ಡಾ.ರವಿ ಪಾಟೀಲ ಇತರರಿದ್ದರು.

ಕಾರಂಜಿಮಠದ ಕೊಡುಗೆ ಅನನ್ಯ

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ಹಳೆಯ ಮಠಗಳಲ್ಲಿ ಒಂದಾಗಿರುವುದು ಕಾರಂಜಿ ಮಠ. ಆಗಿನ ಕಾಲದಲ್ಲಿ ಇದನ್ನು ಬಡವರ ಮಠ ಎಂದು ಕರೆಯುತ್ತಿದ್ದರು. ಕೆಎಲ್ಇ ಸಂಸ್ಥೆಗೆ ಕಾರಂಜಿ ಮಠ ನೀಡಿದ ದೇಣಿಗೆ ಸದಾಕಾಲ ಸ್ಮರಿಸಿಕೊಳ್ಳುವಂತದ್ದು. ಅದೇ ರೀತಿ ಹಲವಾರು ಸಂಸ್ಥೆಗಳಿಗೆ ದೇಣಿಗೆ ನೀಡಿದ ಕಾರಂಜಿಮಠ ದಾನಮ್ಮದೇವಿ ದೇವಸ್ಥಾನ ಸೇರಿದಂತೆ ಬಹಳಷ್ಟು ಕಡೆ ಬೆಳವಣಿಗೆಗೆ ಅನುಕೂಲ ಮಾಡಿಕೊಟ್ಟಿದೆ. ಆದರೆ, ಎಲ್ಲಿಯೂ ಹೇಳಿಕೊಂಡಿಲ್ಲ. ಅವರದು ಯಾವಾಗಲೂ ನೀಡುವ ಕೈ. ತಾವು ಮಾಡಿದ ಕಾರ್ಯಗಳಿಗೆ ಎಂದೂ ಪ್ರಚಾರ ಬಯಸಿದವರಲ್ಲ. ವೀರಶೈವ ಲಿಂಗಾಯತ ಮಠಗಳ ದಾನಗಳ ಮೂಲಕ ಸಂಸ್ಥೆಗಳು ಬೆಳೆದವು. ಗುರುಸಿದ್ಧ ಸ್ವಾಮೀಜಿ ಎಲ್ಲರೊಂದಿಗೆ ಭಾವನಾತ್ಮಕವಾಗಿ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಹೇಳಿದರು.

ಸಮಾಜ ಸೇವೆ ಮಾದರಿ

ಗುರುಸಿದ್ಧ ಸ್ವಾಮೀಜಿ ಅಮೃತ ಮಹೋತ್ಸವ ಸಮಿತಿ ಗೌರವ ಕಾರ್ಯದರ್ಶಿ ಮಹಾಂತೇಶ ಕವಟಗಿಮಠ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಕಾರಂಜಿಮಠದ ಕೊಡುಗೆಗಳು ಅನನ್ಯ. ಜಂಗಮ ತತ್ತ್ವಗಳನ್ನು ಅನುಷ್ಠಾನಗೊಳಿಸಿರುವ ಗುರುಸಿದ್ಧ ಸ್ವಾಮೀಜಿ ಸಾಮಾಜಿಕ ಸೇವೆ ಅಪಾರ. ಶಿವಾನುಭವಗೋಷ್ಠಿಗಳು, ಸಾಧಕರಿಗೆ ಸನ್ಮಾನ, ನಿರಂತರ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಸಮಾಜಮುಖಿ ಸೇವೆ ಇತರರಿಗೂ ಮಾದರಿಯಾಗಿದೆ. ಯುವ ಸಮುದಾಯಕ್ಕೆ ಮಾರ್ಗದರ್ಶನ ನೀಡುತ್ತ ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಮಠಗಳಲ್ಲಿರುವ ಸ್ವಾಮೀಜಿಗಳಿಗೆ ಸಮಾಜದಲ್ಲಿ ಬಹಳ ಗೌರವಿದೆ. ಗುರುಸಿದ್ದ ಸ್ವಾಮೀಜಿ ಅಮೃತಮಹೋತ್ಸವ ಆಚರಿಸಲು ಬಹಳ ಸಂತೋಷವೆನಿಸುತ್ತಿದೆ ಎಂದರು.

ಎಲ್ಲ ವರ್ಗದವರಿಂದ, ಎಲ್ಲ ಜಾತಿ ಧರ್ಮದವರಿಂದ ನಡೆದ ಈ ಕಾರ್ಯಕ್ರಮ ಅಪಾರವಾದ ಸಂತಸ ತಂದಿದೆ. ಎಲ್ಲರನ್ನು ಒಗ್ಗೂಡಿಸಿದಾಗ ಮಾತ್ರ ಒಳಿತಾಗುತ್ತದೆ. ಲೋಕ ಕಲ್ಯಾಣ ವಿಷಯದಲ್ಲಿ ಯಾವುದೇ ಮಠಗಳು ಒಂದೇ ಜಾತಿಗೆ ಸೀಮಿತವಾಗಿ ಯಾವುದೇ ಕಾರ್ಯಗಳನ್ನು ಕೈಗೊಳ್ಳದೆ ಸಮಷ್ಠಿ ಹಿತ ಮುಖ್ಯವಾಗುವ ಆಶಯವಿರಬೇಕು. | ಗುರುಸಿದ್ಧ ಸ್ವಾಮೀಜಿ ಕಾರಂಜಿಮಠ ಬಸವ ತತ್ತ್ವದ ಅನುಸಾರ ಸಾಮಾಜಿಕ ಕಾರ್ಯವನ್ನು ಮಾಡಿ ಅದ್ವಿತೀಯ ಸ್ವಾಮಿಗಳೆನಿಸಿಕೊಂಡವರು ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ. ಅವರ ಧಾರ್ಮಿಕ, ಸಾಮಾಜಿಕ ಸೇವೆ ಅನನ್ಯ. ಮಠದ ಪರಂಪರೆ ಮುಂದುವರಿಸಿಕೊಂಡು ಬರುತ್ತಿದ್ದಾರೆ. | ಜಗದೀಶ ಶೆಟ್ಟರ್, ಸಂಸದ ಬಸವ ತತ್ತ್ವದಂತೆ ವೀರಶೈವ ಲಿಂಗಾಯತ ಮಠಗಳು ಕೈಗೊಂಡ ಶಿಕ್ಷಣ ದಾಸೋಹ, ಅನ್ನ ದಾಸೋಹ ಕಾರ್ಯಗಳು ಸರ್ಕಾರಕ್ಕೆ ಮಾರ್ಗದರ್ಶಿಯಾಗಿವೆ. ಅದನ್ನೇ ಸರ್ಕಾರಗಳು ಇಂದು ಮಾಡುತ್ತಿವೆ. ಸರ್ಕಾರ ಮಾಡುವ ಕೆಲಸಕ್ಕೆ ಪರ್ಯಾಯವಾಗಿ ಮಠಮಾನ್ಯಗಳು ಸಮಾಜಮುಖಿ ಕಾರ್ಯವನ್ನು ಮಾಡಿವೆ. | ಲಕ್ಷ್ಮೀ ಹೆಬ್ಬಾಳ್ಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net