

ಸಿರಗುಪ್ಪ: ನಗರದ ಶ್ರೀ ಮಹಾಂತೇಶ್ವರ ಆಗ್ರೋ ಟ್ರೇಡರ್ಸ್‌ನಲ್ಲಿ 3201 ತಳಿಯ ಹೈಟೆಕ್ ಜೋಳದ ಬಿತ್ತನೆ ಬೀಜವನ್ನು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರಿಗೆ ಕೃಷಿ ಇಲಾಖೆ ನೋಟಿಸ್ ನೀಡಿದೆ.
ತಾಲೂಕಾದ್ಯಂತ ಉತ್ತಮ ಮಳೆಯಾಗಿದ್ದು, ರೈತರು ಜೋಳ ಬಿತ್ತನೆಗೆ ಮುಂದಾಗಿದ್ದಾರೆ. ನಗರದಲ್ಲಿ ಜೋಳದ ಬೀಜ ಖರೀದಿಸಲು ರಾಯಚೂರು, ಕೊಪ್ಪಳ, ಕರ್ನೂಲ್ ಜಿಲ್ಲೆಯ ರೈತರು ಬರುತ್ತಿದ್ದಾರೆ. 3201 ಹೈಟೆಕ್ ಜೋಳದ ಬೀಜಕ್ಕೆ ಬೇಡಿಕೆ ಹೆಚ್ಚಿದೆ. ಗುರುವಾರ ರೈತರು ನಗರದ ಶ್ರೀ ಮಹಾಂತೇಶ್ವರ ಆಗ್ರೋ ಟ್ರೇಡರ್ಸ್‌ನಲ್ಲಿ ಬೀಜ ಖರೀದಿಗೆ ಬಂದಾಗ ಹೆಚ್ಚಿನ ಬೆಲೆ ಹೇಳಲಾಗಿದೆ. ಬಿಲ್‌ನಲ್ಲಿ ಸರ್ಕಾರ ನಿಗದಿಪಡಿಸಿದ ದರ 3 ಕೆಜಿ ಪಾಕೆಟ್‌ಗೆ 1300 ರೂ. ಎಂದು ನಮೂದಿಸಿ ಹೆಚ್ಚುವರಿಯಾಗಿ 450 ರೂ. ಪಡೆಯುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಒತ್ತಾಯದ ಮೇರೆಗೆ ಸ್ಥಳಕ್ಕೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಬಿ.ಪಾಟೀಲ್, ಬೀಜ ಪರೀಕ್ಷಕ ಮತ್ತು ಸಿರಗುಪ್ಪ ರೈತ ಸಂರ್ಪಕ ಕೇಂದ್ರದ ಕೃಷಿ ಅಧಿಕಾರಿ ಬಾಲಾಜಿ ನಾಯ್ಕ ಭೇಟಿ ನೀಡಿದರು. ರೈತರಿಂದ ಮಾಹಿತಿ ಪಡೆದು ಇನ್ನು ಮುಂದೆ ಇಂತಹ ಘಟನೆಗಳು ನಡೆದರೆ ಅಂಗಡಿಯನ್ನು ಸೀಜ್ ಮಾಡಿ ಪರವಾನಗಿ ರದ್ದುಮಾಡಿ ನ್ಯಾಯಾಲಯದಲ್ಲಿ ದೂರು ದಾಖಲಿಸುವುದಾಗಿ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರು. ಅಲ್ಲದೆ ಕಾರಣ ಕೇಳಿ ನೋಟಿಸ್ ನೀಡಿದರು.
ಸರ್ಕಾರ ನಿಗದಿಪಡಿಸಿದ ದರಕ್ಕೆ ಬಿತ್ತನೆ ಬೀಜ ಮಾರಾಟ ಮಾಡಬೇಕೆಂದು ಅಂಗಡಿಗಳ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ಒಂದು ವೇಳೆ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು. ಅಧಿಕ ಬೆಲೆಗೆ ಜೋಳದ ಬಿತ್ತನೆ ಬೀಜ ಮಾರಾಟ ಮಾಡಿದ ಶ್ರೀ ಮಹಾಂತೇಶ್ವರ ಆಗ್ರೋ ಟ್ರೇಡರ್ಸ್‌ನ ಮಾಲೀಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ.
> ಎಸ್.ಬಿ.ಪಾಟೀಲ್ ಎಡಿ, ಕೃಷಿ ಇಲಾಖೆ, ಸಿರಗುಪ್ಪ