ನದಿಗೆ 1.40 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

18 DVD 07
ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ 1.40ಲಕ್ಷ ಕ್ಯೂಸೆಕ್ ನೀರು ಹರಿಸಿದ್ದರಿಂದ ಹೂವಿನಹೆಡಗಿ ಶ್ರೀಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಮುಳುಗಡೆಯಾಗಿರುವುದು.
Published on

ದೇವದುರ್ಗ: ಕೃಷ್ಣಾ ಮೇಲ್ದಂಡೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ನಾರಾಯಣಪುರ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಜಲಾಶಯದಿಂದ ಕೃಷ್ಣಾ ನದಿಗೆ ಸೋಮವಾರ 30 ಕ್ರಸ್ಟ್‌ಗೇಟ್‌ಗಳ ಮೂಲಕ 1,40,890 ಕ್ಯೂಸೆಕ್ ನೀರು ಹರಿಬಿಟ್ಟಿದ್ದು, ತಾಲೂಕಿನ ಹೊಳೆದಂಡೆ ಮೇಲೆ ನೆರೆ ಆತಂಕ ಮನೆ ಮಾಡಿದೆ.

ಎರಡ್ಮೂರು ದಿನಗಳಿಂದ ಜಲಾಶಯದಲ್ಲಿ ಒಳಹರಿವು ಒಂದು ಲಕ್ಷ ಕ್ಯೂಸೆಕ್‌ಗೂ ಹೆಚ್ಚಿದೆ. ವಾರದಿಂದ ಜಲಾಶಯಕ್ಕೆ ಬಂದ ನೀರು ಯಥಾವತ್ತಾಗಿ ನದಿಗೆ ಹರಿಸಲಾಗುತ್ತಿದೆ.

33.31 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 31.05 (ಶೇ.93.22) ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. ಆಲಮಟ್ಟಿಯಲ್ಲಿ ಒಂದು ಲಕ್ಷ ಕ್ಯೂಸೆಕ್ ಒಳಹರಿವು ಇದ್ದು ಡ್ಯಾಂ ಬಹುತೇಕ ಭರ್ತಿಯಾಗಿದೆ. ಹೀಗಾಗಿ ಭಾನುವಾರ ರಾತ್ರಿ ಜಲಾಶಯದಿಂದ 1ಲಕ್ಷ ಕ್ಯೂಸೆಕ್ ನೀರು ಹೊರಬಿಟ್ಟಿದ್ದರೆ, ಸೋಮವಾರ ಸಂಜೆ 1.40 ಲಕ್ಷ ಕ್ಯೂಸೆಕ್ ಹೆಚ್ಚಿಸಲಾಗಿದೆ.

ನದಿಗೆ ಅಪಾರ ನೀರು ಬಿಟ್ಟಿದ್ದರಿಂದ ಹೂವಿನಹೆಡಗಿ ಶ್ರೀ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಮತ್ತೆ ಮುಳುಗಡೆಯಾಗಿದೆ. ಕೊಪ್ಪರದ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ, ಬಸವೇಶ್ವರ ದೇವಸ್ಥಾನ ಹಾಗೂ ಆಂಜನೇಯ ದೇವಸ್ಥಾನ ಸಮೀಪ ನೀರು ಬಂದಿದೆ. ಇನ್ನು ಅರಶಿಣಗಿ ಗ್ರಾಮದ ಶ್ರೀ ಅಣೆಮಲ್ಲೇಶ್ವರ ದೇವಸ್ಥಾನ, ಅಂಜಳದ ಶ್ರೀ ಬಸವೇಶ್ವರ ದೇವಸ್ಥಾನ, ಗೂಗಲ್‌ನ ಶ್ರೀ ಅಲ್ಲಮಪ್ರಭು ದೇವಸ್ಥಾನ ಮೆಟ್ಟಿಲುವರೆಗೆ ನೀರುಬಂದಿವೆ.ವೀರಗೋಟ ಗ್ರಾಮದ ಶ್ರೀ ಮೌನಲಿಂಗೇಶ್ವರ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ನೀರು ಬಂದಿವೆ.

ನದಿದಂಡೆ ಗ್ರಾಮಗಳಾದ ತಿಂಥಣಿ ಬ್ರಿಡ್ಜ್, ಬುಂಕಲದೊಡ್ಡಿ, ಚಿಂಚೋಡಿ, ವೀರಗೋಟ, ಲಿಂಗದಹಳ್ಳಿ, ಬಾಗೂರು, ಗೋಪಳಾಪುರ, ಅಂಜಳ, ಹೂವಿನಹೆಡಗಿ, ಕೊಪ್ಪರ, ದೊಂಡಂಬಳಿ, ಕೋಣಚಪ್ಪಳಿ, ಮ್ಯಾದರ್‌ಗೋಳ್, ಕರ್ಕಿಹಳ್ಳಿ, ಗಾಗಲ್, ಗೂಗಲ್, ಬಸವಂತಪುರ ಸೇರಿ ವಿವಿಧ ಹಳ್ಳಿಯಲ್ಲಿ ನೆರೆಹಾವಳಿ ಭೀತಿಯಿದೆ. ಕೆಲ ರೈತರ ಜಮೀನಿನ ಸಮೀಪದ ನೀರು ಬಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net