

ಬೈಲಹೊಂಗಲ: ರಾಜ್ಯದಲ್ಲಿ ಸಿಎಂ ಖುರ್ಚಿಗಾಗಿ ಕಿತ್ತಾಟ, ಗುದ್ದಾಟ ನಡೆದಿದ್ದು, ಅಭಿವೃದ್ಧಿ ಹಾಗೂ ರೈತಪರ ಚಿಂತನೆಯಿಲ್ಲದ ಸರ್ಕಾರದ ನಡೆ ಖಂಡನೀಯವಾಗಿದೆ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತಿವೃಷ್ಟಿ, ಪ್ರವಾಹ, ಬೆಳೆಹಾನಿಯಾದರೂ ಸರ್ಕಾರ ಸರ್ವೇ ಮಾಡುತ್ತಿಲ್ಲ. ಒಂದು ರೂ. ಪರಿಹಾರವೂ ನೀಡಿಲ್ಲ. ಖರೀದಿ ಕೇಂದ್ರವೂ ತೆರೆಯಲಿಲ್ಲ. 2,500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಬೇಸರದ ಸಂಗತಿ. ವೈಯಕ್ತಿಕ ಹಿತಾಸಕ್ತಿ, ಪ್ರತಿಷ್ಠೆಯಿಂದ ಬಿಡಿಸಿಸಿ ಬ್ಯಾಂಕ್ ಚುನಾವಣೆ ಹಣಬಲ, ತೋಳಬಲದಿಂದ ನಡೆಯಿತು. ಸಕ್ಕರೆ ಉತ್ಪಾದನೆ ಅಲ್ಲದೆ ವಿದ್ಯುತ್, ಡಿಸ್ಟ್ಟಿಲರಿ, ಸ್ಪೀರಿಟ್ ಸೇರಿ ಉಳಿದೆಲ್ಲ ಉತ್ಪಾದನೆಗಳ ಆಧಾರದ ಮೇಲೆ ಲಾಭಾಂಶ ಹಂಚಿಕೆ ಮಾಡಬೇಕು. ಈವರೆಗೆ ಯಾವ ವರ್ಷವೂ ಕಾರ್ಖಾನೆಗಳು ಲಾಭಾಂಶ ಹಂಚಿಕೆ ಮಾಡಿಲ್ಲ. ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದರು. ಬಿಜೆಪಿ ಮುಖಂಡರಾದ ಗುರು ಮೆಟಗುಡ್ಡ, ಸುನೀಲ ಮರಕುಂಬಿ, ಗುರುಪಾದ ಕಳ್ಳಿ, ಜಗದೀಶ ಬೂದಿಹಾಳ, ಎ್.ಎಸ್.ಸಿದ್ದನಗೌಡರ ಇತರರಿದ್ದರು.