ಅನಧಿಕೃತ ಬೀಜ ಮಾರಾಟದ ವಿರುದ್ಧ ಕ್ರಮ

MEETINIG
Published on

ಯಾದಗಿರಿ: ಜಿಲ್ಲೆಯಲ್ಲಿ ಮುಂಗಾರು ಆರಂಭವಾಗಿದ್ದು, ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸುವ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಕೊರತೆಯಾಗದಂತೆ ಕೃಷಿ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಸೂಚನೆ ನೀಡಿದ್ದಾರೆ.

ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಸಂಬಂಧಿಸಿದಂತೆ 2020-21ನೇ ಸಾಲಿನ ಮುಂಗಾರು ಹಂಗಾಮಿನ ಸನ್ನದ್ಧತೆ ಹಾಗೂ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳ ಪೂರ್ವಸಿದ್ಧತೆ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಅನಧಿಕೃತವಾಗಿ ಹತ್ತಿ ಬೀಜ ಹಾಗೂ ಇನ್ನಿತರೆ ಬಿತ್ತನೆ ಬೀಜಗಳ ಮಾರಾಟ ಕಂಡುಬಂದಲ್ಲಿ ಜಾಗೃತದಳಗಳ ಮೂಲಕ ದಾಳಿ ನಡೆಸಿ, ಪ್ರಕರಣ ದಾಖಲಿಸಬೇಕು ಎಂದು ತಿಳಿಸಿದರು.

ಕಳೆದ ಬಾರಿ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದ್ದರಿಂದ ಯೂರಿಯಾ ರಸಗೊಬ್ಬರದ ಕೊರತೆಯಾಗಿತ್ತು. ಅದರಂತೆ ಪ್ರಸಕ್ತ ಸಾಲಿನಲ್ಲಿ ಯಾವುದೇ ರೀತಿಯ ಕೊರತೆ ಬೀಳಬಾರದು. ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಪೂರೈಕೆಗಾಗಿ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಿ. ಏನಾದರೂ ಸಮಸ್ಯೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಪತ್ರ ಬರೆಯುವಂತೆ ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಸಾರ್ವಜನಿಕ ಸೇವೆ ನೀಡುವ ಮತ್ತು ಹೆಚ್ಚಿನ ಜನರ ಓಡಾಟ ಇರುವಂತಹ ಆರ್ಟಿಒ ಕಚೇರಿ, ನಾಡಕಚೇರಿಗಳು, ರೈತ ಸಂಪರ್ಕ ಕೇಂದ್ರಗಳು, ಉಪ ನೋಂದಣಾಧಿಕಾರಿಗಳ ಕಚೇರಿ, ಕನರ್ಾಟಕ ಒನ್ ಹಾಗೂ ಬ್ಯಾಂಕ್ಗಳ ಮುಂದೆ ಕೋವಿಡ್-19 ಸಂಬಂಧ ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಬ್ಯಾರಿಕೇಡ್ ಅಳವಡಿಸಬೇಕು. ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ನಿರ್ದೇಶನ ನೀಡಿದರು.

ಜಂಟಿ ಕೃಷಿ ನಿರ್ದೇಶಕಿ ಆರ್.ದೇವಿಕಾ ಮಾತನಾಡಿ, ಜೂನ್ 1ರಿಂದ ಮುಂಗಾರು ಆರಂಭವಾಗಿದೆ. 2 ದಿನಗಳಲ್ಲಿ ವಾಡಿಕೆ 5 ಮಿ.ಮೀ ಮಳೆಗಿಂತ ಹೆಚ್ಚಿನ ಮಳೆ (22 ಮಿ.ಮೀ) ಸುರಿದಿದೆ. ಜಿಲ್ಲೆಯಲ್ಲಿ 2,90,897 ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿ ಹೊಂದಿದ್ದು, ಈಗಾಗಲೇ ಹೆಸರು ಬಿತ್ತನೆ ಆರಂಭವಾಗಿದೆ. ಕೋವಿಡ್-19 ಸಂಬಂಧ ಮುಂಜಾಗ್ರತಾ ಕ್ರಮಗಳೊಂದಿಗೆ ರಿಯಾಯಿತಿ ದರದ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಇಲ್ಲ ಎಂದು ಮಾಹಿತಿ ನೀಡಿದರು.

ಪ್ರವಾಹದ ಸಂದರ್ಭಗಳನ್ನು ಎದುರಿಸಲು ಸಂಬಂಧಪಟ್ಟ ಇಲಾಖೆಗಳು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಜಿಲ್ಲೆಯ ಅಣೆಕಟ್ಟು, ಬ್ರಿಡ್ಜ್ ಕಂ. ಬ್ಯಾರೇಜ್ ದುರಸ್ತಿ ಹಾಗೂ ಇದರಲ್ಲಿ ಬರುವ ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಳ್ಳಬೇಕು. ಕಾಲುವೆ ಮತ್ತು ಸೇತುವೆಗಳ ದುರಸ್ತಿ ಮಾಡಿಕೊಳ್ಳುವಂತೆ ಕೆಬಿಜೆಎನ್ಎಲ್ ನಾರಾಯಣಪುರ ಮತ್ತು ಭೀ.ಗುಡಿ ಮುಖ್ಯ ಇಂಜಿನಿಯರ್ಗಳು ಹಾಗೂ ಖಾನಾಪೂರ ಏತ ನೀರಾವರಿ ಕಾರ್ಯನಿವರ್ಾಹಕ ಇಂಜಿನಿಯರ್ಗೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲೆಗೆ 32 ಲಕ್ಷ ರೂ.ಗಳ ವೆಚ್ಚದಲ್ಲಿ ಇನ್ಫ್ಲೆಡೇಬಲ್ ರಬ್ಬರ್ ಬೋಟ್ ವಿಥ್ ಓಬಿಎಂ 2 ಬೋಟ್ಗಳಿಗೆ ಸರ್ಕಾ ರದಿಂದ ಅನುಮತಿ ದೊರೆತಿದೆ. ಯಾವ ತರಹದ ಬೋಟ್ಗಳು ಬೇಕೆಂಬುದರ ಬಗ್ಗೆ ವರದಿ ಸಿದ್ಧಪಡಿಸಿಕೊಂಡು ಟೆಂಡರ್ ಕರೆಯಲು ಕ್ರಮ ವಹಿಸುವಂತೆ ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ ಹನುಮನಗೌಡ ಪೊಲೀಸ್ ಪಾಟೀಲ್ ಅವರಿಗೆ ತಿಳಿಸಿದರು. ಜಿಲ್ಲಾ ವಿಪತ್ತು ನಿರ್ವಹಣಾ ಕಾಲ್ ಸೆಂಟರ್ಗೆ ಆಪರೇಟರ್ ತೆಗೆದುಕೊಳ್ಳಲು ಸಲ್ಲಿಸಿದ ಪ್ರಸ್ತಾವನೆ ಬಗ್ಗೆ ಅನುಸರಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಶೃತಿ ದೇಸಾಯಿ ಅವರಿಗೆ ಸೂಚಿಸಿದರು.

ಜಿಪಂ ಸಿಇಒ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್ ಸೋನವಣೆ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net