ಅಧಿಕಾರಿಗಳಿಗೆ ಚೆಕ್‌ಪೋಸ್ಟ್‌ಗಳಲ್ಲಿರುವ ಸಮಸ್ಯೆಗಳ ಬಗ್ಗೆ ಮಾಹಿತಿ

0101
Published on

ಬೋರಗಾಂವ: ಬೆಳಗಾವಿ ಜಿಲ್ಲೆಯಲ್ಲಿ ಕರೊನಾ ವೈರಸ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಜಿಲ್ಲಾಡಳಿತ ಗಡಿಭಾಗದ ಬೋರಗಾಂವ ಚೆಕ್‌ಪೋಸ್ಟ್ ನಿರ್ಲಕ್ಷಿಸುತ್ತಿದೆ ಎಂದು ಪಿಕೆಪಿಎಸ್ ಚೇರ್ಮನ್, ಬಿಜೆಪಿ ಮುಖಂಡ ಉತ್ತಮ ಪಾಟೀಲ ಆರೋಪಿಸಿದ್ದಾರೆ.

ಸೋಮವಾರ ಗಡಿಭಾಗದ ಆಯಕೋ ಹಾಗೂ ಪಾಚಮೈಲ್ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿ ಅಲ್ಲಿಯ ನಿರ್ಲಕ್ಷೃ ಕಂಡು ಅಸಮಾಧಾನಗೊಂಡ ಅವರು, ನಿಪ್ಪಾಣಿ ಹಾಗೂ ಚಿಕ್ಕೋಡಿಯ ವಿವಿಧ ಅಧಿಕಾರಿಗಳಿಗೆ ಚೆಕ್‌ಪೋಸ್ಟ್‌ಗಳಲ್ಲಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು.

ಗಡಿಭಾಗದ ಬೋರಗಾಂವ ಚೆಕ್ ಪೋಸ್ಟ್‌ನಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಬಿಟ್ಟರೆ ಉಳಿದ ಯಾವ ಅಧಿಕಾರಿಗಳೂ ಇಲ್ಲ. ಹಾಗಾಗಿ, ಇಲ್ಲಿನ ಜನರಿಗೆ ಕರೊನಾ ಸೋಂಕಿನ ಆತಂಕ ಎದುರಾಗಿದೆ. ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಚೆಕ್‌ಪೋಸ್ಟ್‌ಗೆ ಹೆಚ್ಚುವರಿ ಭದ್ರತೆ ಒದಗಿಸಬೇಕು. ಬೋರಗಾಂವ ಸರ್ಕಲ್‌ನಿಂದ ಮಹಾರಾಷ್ಟ್ರ ರಾಜ್ಯಕ್ಕೆ ಹೋಗಲು 5 ರಸ್ತೆಗಳಿವೆ. ಅಲ್ಲದೆ, ರಾಜ್ಯ ಸಂಪರ್ಕ ರಸ್ತೆ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಿವೆ.

ಇವುಗಳಿಂದ ನೆರೆಯ ಮಹಾರಾಷ್ಟ್ರ ರಾಜ್ಯದಿಂದ ಪ್ರತಿದಿನ ನೂರಾರು ವಾಹನಗಳು ಓಡಾಡುತ್ತಿವೆ. ಅಕ್ರಮ ಮದ್ಯ ಹಾಗೂ ಗುಟ್ಖಾ ಸಾಗಿಸಲು ಪ್ರಮುಖ ಕೇಂದ್ರವಾಗಿದೆ. ಸಮೀಪದ ಕೊಗನೋಳಿ ಟೋಲ್ ಮಾದರಿಯಂತೆ ಆಯಕೊ ಹತ್ತಿರದ ಚೆಕ್‌ಪೋಸ್ಟ್‌ನಲ್ಲಿ ಕೂಡ ಬಿಗಿ ಭದ್ರತೆ ಒದಗಿಸಬೇಕು. ಓರ್ವ ಪೊಲೀಸ್ ಸಿಬ್ಬಂದಿ ಬಿಟ್ಟರೆ ಇಲ್ಲಿ ಕಂದಾಯ ಇಲಾಖೆ, ಹೋಂ ಗಾರ್ಡ್ ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿ ನೇಮಕವಾಗಿಲ್ಲ. ಗಡಿಭಾಗದ ಚೆಕ್‌ಪೋಸ್ಟ್‌ಗಳಿಗೆ ಸಿಸಿ ಟಿವಿ ಕ್ಯಾಮರಾ ಅಳವಡಿಸಬೇಕು ಎಂದು ಪಾಟೀಲ ಜಿಲ್ಲಾಡಳಿಕ್ಕೆ ಮನವಿ ಮಾಡಿದರು.

ಕುರುಂದವಾಡ ಪೊಲೀಸ್ ಠಾಣೆ ನಿರೀಕ್ಷಕ ವಿಕಾಸ ಅಡಸುಳ, ಸದಲಗಾ ಪೊಲೀಸ್ ಠಾಣೆಯ ಶಿವಾಜಿ ವಾಘಮೋರೆ, ಪಪಂ ಮುಖ್ಯಾಧಿಕಾರಿ ಪಿ.ಬಿ. ದೇವಮಾನೆ, ಕಂದಾಯ ಸಹಾಯಕ ವಿಲಾಸ ಮಾಳಿ, ಪಪಂ ಅಧಿಕಾರಿ ಪೋಪಟ ಕುರಳೆ, ಪಪಂ ಅಧ್ಯಕ್ಷೆ ಶೋಭಾ ಗೋರವಾಡೆ, ಸದಸ್ಯ ಅಭಯಕುಮಾರ ಮಗದುಮ್ಮ, ಮಾಣಿಕ ಕುಂಬಾರ, ಪ್ರದೀಪ ಮಾಳಿ, ಶಿವಾನಂದ ರಾಜಮಾನೆ, ರಾಜು ಮಗದುಮ್ಮ, ಫಾರೂಕ್ ಮುಜಾವರ, ಅನಿಲ ಗುರವ, ಬಾಳಾಸೋ ಸಾತಪೂತೆ, ಎಂ.ಆರ್. ಗಡ್ಡೆ, ಶೀತಲ ಗೋರವಾಡೆ, ಸುಭಾಷ ಗಜರೆ, ನಾಗರಾಜ ಭಜಂತ್ರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net