ರಾತ್ರಿ ಗೃಹ ಬಳಕೆಗೆ ಮಾತ್ರ ಕರೆಂಟ್ ಉಪಯೋಗಿಸಲಿ

19Huk2
Published on

ಹುಕ್ಕೇರಿ: ಇಂಧನ ಇಲಾಖೆ ನೀರಾವರಿ ಪಂಪಸೆಟ್‌ಗಳ ಲೈನ್ ಮೇಲೆ ಬರುವ ತೋಟದ ಮನೆಗಳ ವಿದ್ಯುತ್‌ನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಬಳಸದಂತೆ ನಿಯಂತ್ರಕ ಅಳವಡಿಸಿ ವಿದ್ಯುತ್ ಸರಬರಾಜು ಮಾಡಲು ಆದೇಶಿಸಿದ್ದಾರೆ. ಇದರಿಂದ ತೋಟಪಟ್ಟಿಯ ಮನೆಗಳಿಗೆ ರಾತ್ರಿ ವೇಳೆ ವಿದ್ಯುತ್ ಸರಬರಾಜಿಗೆ ತೊಂದರೆಯಾಗುತ್ತದೆ ಎಂದು ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಕಲಗೌಡ ಪಾಟೀಲ ಹೇಳಿದರು.

ಪಟ್ಟಣದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರು, ವಯೋವೃದ್ಧರು ಮತ್ತು ವಿದ್ಯಾರ್ಥಿಗಳಿಗೆ ವಿದ್ಯುತ್ ಕಡಿತದಿಂದ ಆಗುವ ಸಮಸ್ಯೆಯನ್ನು ಪರಿಹರಿಸಲು ರಾತ್ರಿ ವೇಳೆ ಗೃಹ ಬಳಕೆ ಹೊರತುಪಡಿಸಿ ಬೇರೆ ಕಾರ್ಯಗಳಿಗೆ ವಿದ್ಯುತ್ ಬಳಸದಿರಲು ತಿಳಿವಳಿಕೆ ನೀಡುತ್ತಿದ್ದೇವೆ ಎಂದರು.

ನಿರ್ದೇಶಕ ಪೃಥ್ವಿ ಕತ್ತಿ ಮಾತನಾಡಿ, ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ ಗೃಹ ಬಳಕೆಗೆ ಮಾತ್ರ ಅನುಕೂಲವಾಗುವಂತೆ ವಿದ್ಯುತ್ ಪೂರೈಕೆ ಮಾಡಲು ರಾಜ್ಯ ಸರ್ಕಾರ ಆದೇಶಿಸಿದೆ. ತಾಲೂಕಿನ ಪ್ರತಿಯೊಂದು ವಿದ್ಯುತ್ ಉಪಕೇಂದ್ರಗಳಲ್ಲಿ ಸರ್ಕಾರ ವಿದ್ಯುತ್ ನಿಯಂತ್ರಣಾ ರಿಲೇ ಅಳವಡಿಸಿದ್ದರಿಂದ ಕೇಂದ್ರದಲ್ಲಿ ಬಳಸುವ ನಿಗದಿಗಿಂತ ಹೆಚ್ಚವರಿ ವಿದ್ಯುತ್ ಬಳಸಿದರೆ ತಕ್ಷಣ ವಿದ್ಯುತ್ ಕಡಿತಗೊಂಡು ವಿದ್ಯುತ್ ಸರಬರಾಜಿಗೆ ತೊಂದರೆಯಾಗುತ್ತದೆ. ಆದ್ದರಿಂದ ಮೊದಲಿದ್ದ ರಿಲೇ ರಹಿತ ವಿದ್ಯುತ್ ಸರಬರಾಜು ಪದ್ಧತಿ ಬಳಸಲು ಸಂಘಕ್ಕೆ ಸರ್ಕಾರ ಅನುಮತಿಸಬೇಕು. ಈಗ ಅಳವಡಿಸಿರುವ ವಿದ್ಯುತ್ ನಿಯಂತ್ರಕಗಳನ್ನು ವಾಪಸ್ಸು ಪಡೆಯಬೇಕೆಂದರು.

ಉಪಾಧ್ಯಕ್ಷ ವಿಷ್ಣು ರೇಡೇಕರ, ನಿರ್ದೇಶಕ ರವೀಂದ್ರ ಹಿಡಕಲ್ ಮತ್ತು ಕೆ.ಕೆ.ಬೆನಚನಮರಡಿ ಮಾತನಾಡಿ, ರಾತ್ರಿ ವೇಳೆ ವಿದ್ಯುತ್‌ನ್ನು ಗೃಹ ಬಳಕೆ ಹೊರತು ಅನ್ಯ ಕಾರ್ಯಗಳಿಗೆ ಬಳಸಬಾರದು. ಈ ವಿಷಯವನ್ನು ಸಚಿವ ಸತೀಶ ಜಾರಕಿಹೊಳಿ ಅವರ ಮೂಲಕ ಇಂಧನ ಸಚಿವರಿಗೆ ಮತ್ತು ಇಲಾಖೆಗೆ ತಿಳಿಸಿ ತೋಟಪಟ್ಟಿ ನಿವಾಸಿಗಳ ಸಮಸ್ಯೆ ಪರಿಹರಿಸಲು ವಿನಂತಿಸಿದ್ದೇವೆ ಎಂದರು.

ಸಂಘದ ರೆಸಿಡೆಂಟ್ ಇಂಜಿನಿಯರ್ ನೇಮಿನಾಥ ಖೇಮಲಾಪುರೆ, ವ್ಯವಸ್ಥಾಪಕ ದುರದುಂಡಿ ನಾಯಿಕ, ಉದಯ ಮಗದುಮ್ಮ, ಎನ್.ಎಸ್.ಸರದೇಸಾಯಿ, ಮಂಜುನಾಥ ಖುದನೂರಿ, ವಿನಾಯಕ ರಾಮದುರ್ಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net