ನನ್ನವರಿಗಾಗಿ ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧ

30manju1A-Web
ಬೆಳಗಾವಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಸಭೆ ನಡೆಸಿದರು. ಜಿಲ್ಲಾಧಿಕಾರಿ ಎಂ.ಜಿ. ಹಿರಮೇಠ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಇತರರು ಇದ್ದರು.
Published on

ಬೆಳಗಾವಿ: ತ್ಯಾಗ ಮಾಡಿರುವ 17 ಶಾಸಕರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಚಿವ ಸಂಪುಟ ವಿಸ್ತರಣೆ ವೇಳೆ ಅವಕಾಶ ನೀಡುವ ಭರವಸೆ ನೀಡಿದ್ದಾರೆ. ಅದು ಈಡೇರದಿದ್ದಲ್ಲಿ ನನ್ನನ್ನು ನಂಬಿ ಬಂದಿರುವ ಶಾಸಕರಿಗಾಗಿ ನಾನು ಸಚಿವ ಸ್ಥಾನ ತ್ಯಾಗ ಮಾಡಲೂ ಸಿದ್ಧ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನೊಂದಿಗೆ ಬಂದ 17 ಶಾಸಕರಿಗೆ ಸಚಿವ ಸ್ಥಾನ ಸಿಗಲೇಬೇಕು. ಅವರೆಲ್ಲರೂ ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ. ಯಾವುದೇ ಶಾಸಕರು ಬಂಡಾಯ ಸಭೆ ನಡೆಸಿಲ್ಲ. ಸಚಿವ ಸ್ಥಾನಕ್ಕಾಗಿ ಯಾರ ಮೇಲೆಯೂ ಒತ್ತಡ ಹಾಕಿಲ್ಲ. ಬಿಜೆಪಿಯಲ್ಲಿ ಮೂಲ ಮತ್ತು ವಲಸಿಗರು ಎಂಬುದಿಲ್ಲ. ನಾವು ಎಲ್ಲರೂ ಒಂದೇ ಎಂದರು.

ಇದೆ ಅವಕಾಶ: ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸಚಿವ ಸಂಪುಟ ವಿಸ್ತರಣೆ ಒಂದು ತಿಂಗಳು ಮುಂದೆ ಹೋಗಬಹುದು. ಇಲ್ಲವೆ, ವಿಶೇಷ ಅನುಮತಿ ಪಡೆದು ವಿಸ್ತರಣೆ ಮಾಡಲು ಸಿಎಂಗೆ ಅವಕಾಶ ಇದೆ ಎಂದು ಹೇಳಿದರು. ಶಾಸಕ ಮಹೇಶ ಕುಮಠಳ್ಳಿಗೆ ಸಚಿವ ಸ್ಥಾನ ನೀಡುವಂತೆ ನಾನು ಬೇಡಿಕೆ ಇಟ್ಟಿಲ್ಲ. ಆದರೆ, ಸಚಿವ ಶ್ರೀಮಂತ ಪಾಟೀಲ ಅವರನ್ನು ಸಚಿವ ಸ್ಥಾನದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ.

ಸಿ.ಪಿ.ಯೋಗೇಶ್ವರ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಪಕ್ಷದ ವರಿಷ್ಠರು ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಬೆಳಗಾವಿ ಜಿಲ್ಲೆ ವಿಭಜನೆ ಮಾಡುವುದು ಅವಶ್ಯಕ

ಸಾರ್ವಜನಿಕರ ಮತ್ತು ಅಭಿವೃದ್ಧಿ ಹಿತದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಮತ್ತು ಗೋಕಾಕ ಜಿಲ್ಲೆಯನ್ನಾಗಿ ಮಾಡಬೇಕು ಎಂಬುದು ಸರ್ಕಾರದ ನಿರ್ಧಾರವಾಗಿದೆ. ಆದರೆ, ಗಡಿ ಸಮಸ್ಯೆ ಕೋರ್ಟ್‌ನಲ್ಲಿರುವುದರಿಂದ ಹಾಗೂ ಕನ್ನಡಪರ ಸಂಘಟನೆಗಳು ಜಿಲ್ಲಾ ವಿಭಜನೆಗೆ ವಿರೋಧ ಮಾಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಸರ್ಕಾರ ಕೈಗೊಳ್ಳುವ ಕ್ರಮಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net