

ಹಾವೇರಿ: ಇಲ್ಲಿಯ ರಾಘವೇಂದ್ರಸ್ವಾಮಿ ಮಠದ ಆಸ್ತಿ ವಿಚಾರವಾಗಿ ವ್ಯಕ್ತಿಯೊಬ್ಬನ ಕೊಲೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮೀಣ ಠಾಣೆ ಪೊಲೀಸರು 8 ಜನ ಆರೋಪಿಗಳನ್ನು ಭಾನುವಾರ ಬಂಧಿಸಿದ್ದಾರೆ.
ನಗರದ ರಾಘವೇಂದ್ರಸ್ವಾಮಿ ಮಠದ ಧರ್ಮದರ್ಶಿ ಎಂದು ಹೇಳಿಕೊಳ್ಳುತ್ತಿರುವ ಉಡುಪಿ ಮೂಲದ, ಪ್ರಸ್ತುತ ಹಾವೇರಿ ನಿವಾಸಿ ಹರಿಕೃಷ್ಣ ಅನಂತರಾವ್ ಪ್ರಕರಣದ ಪ್ರಮುಖ ಆರೋಪಿ. ಈತನಿಂದ ಸುಪಾರಿ ಪಡೆದಿದ್ದ ಧಾರವಾಡ ಜಿಲ್ಲೆಯ ಮಾಂತು ಅಲಿಯಾಸ್ ಮಾಹಾಂತೇಶ ಲಕ್ಷ್ಮಣ ಜಮನಾಳ, ಸಾಗರ ತಿರುಕಪ್ಪ ಜಮನಾಳ, ಬೆಳಗಾವಿ ಜಿಲ್ಲೆಯ ಪ್ರಜ್ವಲ ಗಣಪತಿ ದೊತ್ರೆ, ರಾಘವೇಂದ್ರ ಸೋಮಪ್ಪ ದೊಡ್ಡಮನಿ, ಅಜಯ ಹನುಮಂತಪ್ಪ ಸಾಲಹಳ್ಳಿ, ಶಿವಾನಂದ ಅರ್ಜುನ ತಗಡಿನಮನಿ, ಬೆಂಗಳೂರ ನಗರದ ವಾಸಿ ಸುನೀಲ ಕೆ.ಎನ್. ನಾಗರಾಜ, ಜಿ. ಚಂಗಲರಾಯಪ್ಪ ಗಜಲಪ್ಪ ಬಂಧಿತ ಆರೋಪಿಗಳು.
ಆರೋಪಿ ಹರಿಕೃಷ್ಣ ಅನಂತರಾವ್ ರಾಘವೇಂದ್ರ ಮಠದ ಮತ್ತು ಅದರ ಆಸ್ತಿ ವಿಚಾರವಾಗಿ ನಗರದ ನಿವಾಸಿ ಜಯರಾಮ ಕೊಲ್ಲಾಪೂರ ಎಂಬವರನ್ನು ಕೊಲೆ ಮಾಡುವ ಬಗ್ಗೆ ಒಳ ಸಂಚು ರೂಪಿಸಿ 8 ಜನ ಆರೋಪಿತರಿಗೆ ಹಣದ ಆಸೆ ತೋರಿಸಿ ಅವರಿಗೆ ಸುಪಾರಿ ಕೊಟ್ಟಿದ್ದ.
ಆ. 10ರಂದು ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆಯ ದೇವಗಿರಿ ಯಲ್ಲಾಪುರ ಪೆಟ್ರೋಲ್ ಬಂಕ್ ಹತ್ತಿರ ಜಯರಾಮ ಕೊಲ್ಲಾಪುರ ಮತ್ತು ಅವರ ಮಗ ವಾದಿರಾಜ ಕೊಲ್ಲಾಪುರ ಅವರು ತಮ್ಮ ಬೈಕ್‌ನಲ್ಲಿ ಹಾವೇರಿ ಕಡೆಗೆ ಬರುತ್ತಿದ್ದಾಗ ಆರೋಪಿಗಳು ಮೋಟಾರ್ ಸೈಕಲ್ ಮೇಲೆ ಬಂದು ಜಯರಾಮ ಅವರು ಹೋಗುತ್ತಿದ್ದ ಬೈಕನ್ನು ಬೆನ್ನು ಹತ್ತಿ ಹಿಂದಿನಿಂದ ಬಂದು ಜಯರಾಮನ ಬೆನ್ನಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿ ಪರಾರಿಯಾಗಿದ್ದರು.
ಈ ಬಗ್ಗೆ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು 8 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹರಿಕೃಷ್ಣನಿಂದ ಸುಪಾರಿ ಪಡೆದು ತಾವು ಕೊಲೆಗೆ ಯತ್ನಿಸಿದ್ದಾಗಿ ಬಂಧಿತ ಆರೋಪಿಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ಪ್ರಮುಖ ಆರೋಪಿಯಾದ ಹರಿಕೃಷ್ಣ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.