ಬಾಲಕನನ್ನು ಅಪಹರಿಸಿ ಕೊಲೆಗೆ ಯತ್ನಿಸಿದವರಿಗೆ 10 ವರ್ಷ ಜೈಲು

10KKT-Web
Published on

ಕೊಕಟನೂರ: ಬಾಲಕನನ್ನು ಅಪಹರಿಸಿ ಕೊಲೆಗೆ ಯತ್ನಿಸಿದ ಆರೋಪ ಸಾಬೀತಾದ್ದರಿಂದ ಇಬ್ಬರು ಅಪರಾಧಿಗಳಿಗೆ ತಲಾ 10 ಸಾವಿರ ರೂ.ದಂಡ ಮತ್ತು ಐದು ವರ್ಷ ಕಾರಾಗೃಹ ಶಿಕ್ಷೆ ನೀಡಿ ಬೆಳಗಾವಿ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯ ಗುರುವಾರ ತೀರ್ಪು ಪ್ರಕಟಿಸಿದೆ. ಕೊಕಟನೂರ ಗ್ರಾಮದ ಇಬ್ರಾಹಿಂ ಲಾಡಜಿಸಾಬ್ ಸನದಿ (52) ಹಾಗೂ ಮೂಲತಃಕೊಕಟನೂರ ಗ್ರಾಮದ, ಸದ್ಯ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ನಿವಾಸಿ ಮಲ್ಲಪ್ಪ ನಾತಪ್ಪ ಗೆಂಡ (45) ಶಿಕ್ಷೆಗೆ ಗುರಿಯಾದವರು.

ಘಟನೆ ವಿವರ: ಕೊಕಟನೂರ ಗ್ರಾಮದ ಜಿಡ್ಡಿ ಬಡಾವಣೆಯ ಕುಮಾರ ಮಾರುತಿ ತುಪ್ಪಸಮುದ್ರ (9) ಎಂಬ ಬಾಲಕನನ್ನು 2016ರ ಡಿ. 17ರಂದು ಅಪಹರಿಸಿ ಕೊಕಟನೂರ ಗ್ರಾಮದ ಪ್ರಥಮ ದರ್ಜೆ ಕಾಲೇಜ್ ಸಮೀಪದ ಜಮೀನಿನಲ್ಲಿದ್ದ ಕಣಿಕೆೆಯಲ್ಲಿ ಕೂಡ್ರಿಸಿ ಮೈಮೇಲೆ ಕಲ್ಲು ಇಟ್ಟು ಕೊಲೆಗೆ ಯತ್ನಿಸಿದ್ದರು. ಈ ಕುರಿತು ಡಿ. 18ರಂದು ಐಗಳಿ ಪೊಲೀಸ್ ಠಾಣೆಯಲ್ಲಿ ಮಾರುತಿ ಹನುಮಂತ ತುಪ್ಪಸಮುದ್ರ ಎಂಬುವರು ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ್ದ ಅಂದಿನ ಪಿಎಸ್‌ಐ ಎಸ್.ಎಂ. ಶಿರಗುಪ್ಪಿ ಹಾಗೂ ಎಎಸ್‌ಐ ಬಿ.ಎಸ್. ದೇವಮಾನೆ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಸಿ.ಎಂ. ಜೋಶಿ ಅವರು, ಅಪರಾಧ ಸಾಬೀತಾಗಿದ್ದರಿಂದ ಇಬ್ಬರಿಗೂ ಐದು ವರ್ಷ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಎಂ.ಎಲ್. ಕುಲಕರ್ಣಿ ವಕಾಲತು ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net