

ಬೆಳಗಾವಿ: ಗ್ರಾಮೀಣ ಪ್ರದೇಶಗಳನ್ನು ಒಳಗೊಂಡಿರುವ ಸ್ಥಳೀಯ ಸಂಸ್ಥೆಗಳನ್ನು ಆಡಳಿತಾತ್ಮಕ ಮತ್ತು ಆರ್ಥಿಕವಾಗಿ ಬಲವರ್ಧನೆಗೊಳಿಸುವ ನಿಟ್ಟಿನಲ್ಲಿ ಜಿಲ್ಲೆಯ ಪುರಸಭೆಗಳನ್ನು ನಗರಸಭೆಗಳನ್ನಾಗಿ, ಪಟ್ಟಣ ಪಂಚಾಯಿತಿಗಳನ್ನು ಪುರಸಭೆಗಳನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಮುಂದಾಗಿದೆ!
ರಾಜ್ಯದಲ್ಲಿಯೇ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳು ಸೇರಿ ಒಟ್ಟು 37 ಸ್ಥಳೀಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಪೈಕಿ ಅಥಣಿ, ಬೈಲಹೊಂಗಲ, ಸವದತ್ತಿ ಹಾಗೂ ಚಿಕ್ಕೋಡಿ ಪುರಸಭೆಗಳನ್ನು ನಗರಸಭೆಗಳನ್ನಾಗಿ ಹಾಗೂ ಖಾನಾಪುರ, ರಾಯಬಾಗ ಪಟ್ಟಣ ಪಂಚಾಯಿತಿಗಳನ್ನು ಪುರಸಭೆಗಳನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಸಿದ್ಧತೆ ಆರಂಭಿಸಿದೆ. ಮತ್ತೊಂದೆಡೆ ಶಾಸಕರು ಕ್ಷೇತ್ರದ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ.
2011ರ ಜನಗಣತಿ ಪ್ರಕಾರ ಬೈಲಹೊಂಗಲ ಜನಸಂಖ್ಯೆ 49,182, ಸವದತ್ತಿ- 41,215, ಅಥಣಿ-47,842 ಹೊಂದಿದೆ. 2023ರ ವೇಳೆಗೆ ಸರಾಸರಿ ಜನಸಂಖ್ಯೆ 50 ಸಾವಿರ ಗಡಿ ದಾಟಿದೆ. ಈ ಹಿನ್ನೆಲೆಯಲ್ಲಿ ಈ ಮೂರೂ ಪುರಸಭೆಗಳು ಹಾಗೂ 1973ರಲ್ಲಿ ಸ್ಥಾಪನೆಯಾಗಿರುವ ಚಿಕ್ಕೋಡಿ ಪುರಸಭೆಗೆ ಎರಡು ಹಳ್ಳಿಗಳನ್ನು ಸೇರ್ಪಡೆಗೊಳಿಸಿ ಒಟ್ಟು ನಾಲ್ಕು ಪುರಸಭೆಗಳನ್ನು ಮೇಲ್ದರ್ಜೆಗೇರಿಸುವ ಕುರಿತು ಯೋಜನೆ ಸಿದ್ಧಗೊಳ್ಳುತ್ತಿದೆ. ಅಲ್ಲದೆ, ಎರಡನೇ ಹಂತದ ಸ್ಥಳೀಯ ನಗರ ಪ್ರದೇಶಗಳ ಸುತ್ತಮುತ್ತಲಿನ ಪ್ರದೇಶಗಳನ್ನು ನಗರ ಯೋಜನಾ ಪ್ರದೇಶದ ವ್ಯಾಪ್ತಿಗೆ ಸೇರಿಸಲು ಕ್ರಮ ವಹಿಸಿದೆ ಎಂದು ಅಕಾರಿಗಳು ಮಾಹಿತಿ ನೀಡಿದ್ದಾರೆ.
ಕೋಟ್ಯಂತರ ರೂ. ಅನುದಾನ ಲಭ್ಯ: ಸದ್ಯ ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗದಿರುವುದು ಹಾಗೂ ಸರ್ಕಾರದಿಂದ ಹೆಚ್ಚುವರಿ ಅನುದಾನ ಬರುತ್ತಿಲ್ಲ. ಈಗಿದ್ದ ಪುರಸಭೆಯ ಅನುದಾನದಲ್ಲಿ ಇಷ್ಟು ದೊಡ್ಡ ಪ್ರಮಾಣದ ಜನಸಂಖ್ಯೆಗೆ ಮೂಲ ಸೌಲಭ್ಯಗಳನ್ನು, ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇವುಗಳನ್ನು ನಗರಸಭೆಗಳನ್ನಾಗಿ ಮೇಲ್ದರ್ಜೆಗೇರಿಸಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ವಿವಿಧ ಯೋಜನೆಗಳಲ್ಲಿ ಕೋಟ್ಯಂತರ ರೂ. ಅನುದಾನ ಬರುತ್ತದೆ. ಆದಾಯದ ಪ್ರಮಾಣ ಕೂಡ ದುಪ್ಪಟ್ಟಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಕೂಡಲೇ 50 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರ ಸ್ಥಳೀಯ ಸಂಸ್ಥೆಗಳನ್ನು ನಗರಸಭೆಗಳನ್ನಾಗಿ ಮೇಲ್ದರ್ಜೆಗೇರಿಸಬೇಕು ಎಂದು ಸ್ಥಳೀಯ ಸಂಸ್ಥೆಗಳ ಸದಸ್ಯರು ಆಗ್ರಹಿಸಿದ್ದಾರೆ.
ಸ್ವಾತಂತ್ರ್ಯ ಪೂರ್ವದಲ್ಲಿ ವಿವಿಧ ರಾಜಮನೆತನ, ಬ್ರ್ರಿಟಿಷರ ಆಡಳಿತಕ್ಕೆ ಒಳಪಟ್ಟಿದ್ದ ಸವದತ್ತಿ, ಬೈಲಹೊಂಗಲ ಪುರಸಭೆಗಳು ಸ್ಥಾಪನೆಗೊಂಡು ನೂರು ವರ್ಷವಾದವು. 1919ರಲ್ಲಿ ಬೈಲಹೊಂಗಲ, 1876ರಲ್ಲಿ ಸವದತ್ತಿ ಪುರಸಭೆ, 1853ರಲ್ಲಿ ಅಥಣಿ ಪುರಸಭೆಯಾದವು. ರಾಜಕೀಯ, ವಿವಿಧ ಕಾರಣಗಳಿಂದಾಗಿ ಇವು ನಗರಸಭೆಗಳಾಗಿ ಮೇಲ್ದರ್ಜೆಗೇರಿಲಿಲ್ಲ. ಇದೀಗ ಸರ್ಕಾರವು ಇವುಗಳನ್ನು ಮೇಲ್ದರ್ಜೆಗೇರಿಸಲು ವಿಶೇಷ ಆಸಕ್ತಿ ವಹಿಸಿರುವುದು ಈ ಭಾಗದ ಜನರ ಕನಸು ನನಸಾಗುತ್ತಿದೆ.
ಮುನಿಷಿಪಲ್ ಕಾಯ್ದೆ ಪ್ರಕಾರ 50 ಸಾವಿರ ಜನಸಂಖ್ಯೆ ಮೇಲ್ಪಟ್ಟ ಪ್ರದೇಶಗಳನ್ನು ನಗರಸಭೆಗಳನ್ನಾಗಿ ಮಾಡಲು ಅವಕಾಶವಿದೆ. 2011ರ ಜನಸಂಖ್ಯೆ ಆಧಾರದ ಮೇಲೆ ಜಿಲ್ಲೆಯ ಕೆಲವು ಪುರಸಭೆಗಳು, ನಗರಸಭೆಗಳಾಗಿ ಮೇಲ್ದರ್ಜೆಗೇರಿಸಲು ಅರ್ಹತೆ ಹೊಂದಿವೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಕೆಲಸ ಪ್ರಗತಿ ಹಂತದಲ್ಲಿದೆ.| ಮಲ್ಲಿಕಾರ್ಜುನ ಕಲಾದಗಿ, ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾ ನಿರ್ದೇಶಕ, ನಗರ ಸ್ಥಳೀಯ ಸಂಸ್ಥೆಗಳು ಬೈಲಹೊಂಗಲ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಈ ಕುರಿತು ಸಾಮಾನ್ಯ ಸಭೆಯಲ್ಲಿ ಠರಾವು ಕೂಡ ಕೈಗೊಳ್ಳಲಾಗಿದೆ.| ಮಹಾಂತೇಶ ಕೌಜಲಗಿ, ಬೈಲಹೊಂಗಲ ಶಾಸಕ ಸವದತ್ತಿ ಪುರಸಭೆ ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲು ಸಿದ್ಧ್ದತೆ ಮಾಡಿಕೊಳ್ಳಲಾಗಿದೆ, ಇದು ಬಹುದಿನಗಳ ಬೇಡಿಕೆಯಾಗಿರುವುದರಿಂದ ಶೀಘ್ರದಲ್ಲೇ ನಗರಸಭೆಯನ್ನಾಗಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಾಗುವುದು.| ವಿಶ್ವಾಸ ವೈದ್ಯ, ಸವದತ್ತಿ ಶಾಸಕ
| ಮಂಜುನಾಥ ಕೋಳಿಗಡ್ಡ ಬೆಳಗಾವಿ