ಸದಸ್ಯರಿಗೆ ಶೇ.15ರಷ್ಟು ಲಾಭಾಂಶ ವಿತರಣೆ

Kore
Published on

ಬೆಳಗಾವಿ: ಸಹಕಾರಿ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿರುವ ಡಾ.ಪ್ರಭಾಕರ ಕೋರೆ ಕೋ-ಆ್ ಕ್ರೆಡಿಟ್ ಸೊಸೈಟಿ ಸದಸ್ಯರಿಗೆ ಶೇ.15ರಷ್ಟು ಲಾಭಾಂಶ ಮತ್ತು ಬ್ಯಾಂಕ್ ಸಿಬ್ಬಂದಿಗೆ ಶೇ.20ರಷ್ಟು ಬೋನಸ್ ನೀಡಲಾಗುತ್ತಿದೆ ಎಂದು ನಿರ್ದೇಶಕಿ ಡಾ.ಪ್ರೀತಿ ದೊಡವಾಡ ಹೇಳಿದರು.

ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಡಾ. ಪ್ರಭಾಕರ ಕೋರೆ ಕೋ-ಆ್ ಕ್ರೆಡಿಟ್ ಸೊಸೈಟಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಗತಿಪಥದ ಅಂಕಿ ಸಂಖ್ಯೆಯ ವರದಿ ಪ್ರಕಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 20 ಶಾಖೆ ಹಾಗೂ ಮಹಾರಾಷ್ಟ್ರದಲ್ಲಿ 14 ಶಾಖೆ ತೆರೆಯಲು ಅನುಮತಿ ಕೋರಿ ಕೇಂದ್ರಿಯ ಸಹಕಾರ ಸಂಘಗಳ ನಿಬಂಧಕರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಅನುಮತಿ ಅನುಸಾರ ಶೀಘ್ರ ಶಾಖೆ ಪ್ರಾರಂಭಿಸುತ್ತೇವೆ ಎಂದು ತಿಳಿಸಿದರು.

ಶೇ.20ರಷ್ಟು ಪ್ರೋತ್ಸಾಹ: ಸಂಘದ 360 ಸಿಬ್ಬಂದಿ ಪೈಕಿ 180 ಸಿಬ್ಬಂದಿ ವೇತನ ಶ್ರೇಣಿ ಅಡಿಯಲ್ಲಿ, 111 ಸಿಬ್ಬಂದಿ ಕ್ರೂಢೀಕೃತ ವೇತನದಡಿಯಲ್ಲಿ ಹಾಗೂ 9 ಜನ ಸಿಬ್ಬಂದಿ ಅವರು ದಿನಗೂಲಿ ವೇತನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿಗೆ ಸಂಘವು ಪೆನ್ಶನ್ ಟ್ರಸ್ಟ್ ಯೋಜನೆ ಅಳವಡಿಸಿ ಅವರ ಭವಿಷ್ಯಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಸಿಬ್ಬಂದಿಗೆ ಶೇ.20ರಷ್ಟು ಪ್ರೋತ್ಸಾಹ ಧನ ನೀಡಲಾಗಿದೆ ಎಂದು ಹೇಳಿದರು.

ಶೀಘ್ರ ಹೊರ ರಾಜ್ಯದಲ್ಲಿ ಶಾಖೆ: ಮುಂಬರುವ ದಿನಗಳಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದಲ್ಲಿ ಶಾಖೆ ತೆರೆಯುವ ಮುಖಾಂತರ ಅಲ್ಲಿನ ಜನರಿಗೆ ಸಹಕಾರಿ ಸೇವೆ ನೀಡಲು ಕಾರ್ಯಯೋಜನೆ ರೂಪಿಸಿದೆ. ಅಥಣಿ ತಾಲೂಕಿನ ತೆಲಸಂಗ, ಸತ್ತಿ, ಮಂಗಸೂಳಿ, ಚಿಕ್ಕೋಡಿ ತಾಲೂಕಿನ ನವನ್ಯಾಳ ಕ್ರಾಸ್ ಅಥವಾ ಶಿರಗಾಂವ, ಗಿರಿಗಾಂವ, ನಿಪ್ಪಾಣಿ ತಾಲೂಕಿನ ಮಾಂಗೂರ, ರಾಯಬಾಗ ತಾಲೂಕಿನ ಮುಗಳಖೋಡ, ಗೋಕಾಕ ತಾಲೂಕಿನ ಘಟಪ್ರಭಾ, ಅಂಕಲಗಿ, ಹುಕ್ಕೇರಿ ತಾಲೂಕಿನ ಯಾದಗೂಡ, ಪಾಶ್ಚಾಪುರ, ಸವದತ್ತಿ ತಾಲೂಕಿನ ಮುನ್ನೋಳಿ, ಯರಗಟ್ಟಿ, ಬೆಳವಡಿ, ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ, ಗೋಕರ್ಣ ಯಲ್ಲಾಪುರ, ಅಂಕೋಲಾ ಹಾಗೂ ಚಿತ್ರದುರ್ಗ, ತುಮಕೂರ, ಮೈಸೂರ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲೂ ಶಾಖೆಗಳನ್ನು ಪ್ರಾರಂಭಿಸಲಾಗುವುದು. ಸೊಸೈಟಿ ಬೆಳವಣಿಗೆ ಮತ್ತು ಜನಪರ ಸೇವೆ ನೀಡುವಲ್ಲಿ ಸಂಸ್ಥಾಪಕ ಡಾ.ಪ್ರಭಾಕರ ಕೋರೆ ಅವರ ಮಾರ್ಗದರ್ಶನ, ಸಲಹೆ, ಸೂಚನೆಗಳು ಮಹತ್ವದ ಪಾತ್ರ ವಹಿಸುತ್ತ ಬಂದಿವೆ ಎಂದರು.

ಅಧ್ಯಕ್ಷ ಮಹಾಂತೇಶ ಪಾಟೀಲ, ಉಪಾಧ್ಯಕ್ಷ ಸಿದಗೌಡ ಮಗದುಮ್ಮ, ದಿಗ್ದರ್ಶಕ ಮಲ್ಲಿಕಾರ್ಜುನ ಕೋರೆ, ಅಣ್ಣಾಸಾಹೇಬ ಸಂಕೇಶ್ವರಿ, ಪಿಂಟು ಹಿರೇಕುರುಬರ, ಬಸನಗೌಡ ಆಸಂಗಿ, ಡಾ.ಸುಕುಮಾರ ಚೌಗಲಾ, ಪ್ರಫುಲ್ ಶೆಟ್ಟಿ, ಬಾಳಪ್ಪ ಉಮರಾಣೆ, ಅಶೋಕ ಚೌಗಲಾ, ಅಮೀತ ಜಾಧವ, ಅನೀಲ ಪಾಟೀಲ, ಶೋಭಾ ಜಕಾತೆ, ಶೈಲಜಾ ಪಾಟೀಲ, ಜಯಶ್ರೀ ಮೇದಾರ, ಪಾರ್ವತಿ ಧರನಾಯಕ, ಶ್ರೀಕಾಂತ ಉಮರಾಣೆ, ವಿವೇಕಾನಂದ ಕಮತೆ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಿ.ಎಸ್.ಕರೋಶಿ ಇತರರಿದ್ದರು.

19.32 ಕೋಟಿ ರೂ. ನಿವ್ವಳ ಲಾಭ

ಡಾ.ಪ್ರಭಾಕರ ಕೋರೆ ಕೋ-ಆ್ ಕ್ರೆಡಿಟ್ ಸೊಸೈಟಿಯು ವಿವಿದ ಭಾಗಗಳಲ್ಲಿ 55 ಶಾಖೆಗಳು 83,806 ಸದಸ್ಯರನ್ನು ಒಳಗೊಂಡಿವೆ. 1,406 ಕೋಟಿ ರೂ. ಠೇವಣಿಯ ಮೇಲೆ 967 ಕೋಟಿ ರೂ. ಸಾಲ ಹಾಗೂ ಮುಂಗಡ ಹೊಂದಿದೆ. ಗುಂತಾವಣೆ 513. ಕೋಟಿ ರೂ., ಬ್ಯಾಂಕ್ ಠೇವಣಿ 125 ಕೋಟಿ ರೂ., ದುಡಿಯುವ ಬಂಡವಾಳ 1,521 ಕೋಟಿ ರೂ., ಸೇರಿ ಬ್ಯಾಂಕ್‌ವು 19.32 ಕೋಟಿ ರೂ. ನಿವ್ವಳ ಲಾಭ ಹೊಂದಿದೆ. ಬ್ಯಾಂಕಿನ ಸಾಲ ವಸೂಲಾತಿ ಶೇ.89ರಷ್ಟಿದೆ ಎಂದು ನಿರ್ದೇಶಕಿ ಡಾ.ಪ್ರೀತಿ ಡೊಡವಾಡ ಮಾಹಿತಿ ನೀಡಿದರು.

ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯ

ಸೊಸೈಟಿಯ ಸಂಸ್ಥಾಪಕ ಡಾ.ಪ್ರಭಾಕರ ಕೋರೆ ಅವರ ಜನ್ಮದಿನದಂದು ಸಸಿ ನೆಡುವ ಕಾರ್ಯಕ್ರಮ, ಸ್ವಚ್ಛತಾ ಅಭಿಯಾನ, ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ, ಸಿರಿ ಧಾನ್ಯಗಳ ಮಹತ್ವ, ಮಹಿಳಾ ಸಬಲೀಕರಣ ಹಾಗೂ ಕ್ಯಾನ್ಸರ್ ರೋಗದ ಜಾಗೃತಿ ಬಗ್ಗೆ ಉಪನ್ಯಾಸ, ಅಂತಾರಾಷ್ಟ್ರೀಯ ಮಟ್ಟದ ಜಂಗೀ ನಿಕಾಲಿ ಕುಸ್ತಿ ಸ್ಪರ್ಧೆ, ಶಾಲಾ ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ.ಪ್ರೀತಿ ದೊಡವಾಡ ತಿಳಿಸಿದರು.

ಪ್ರಸ್ತುತ ದಿನಗಳಲ್ಲಿ ಸಹಕಾರಿ ಕ್ಷೇತ್ರ ಉಳಿಸಿ ಬೆಳೆಸುವುದು ಅವಶ್ಯಕವಾಗಿದೆ. ಸೊಸೈಟಿಯಲ್ಲಿ ಹೂಡಿಕೆ ಮಾಡಿರುವ ಸದಸ್ಯರಿಗೆ ಲಾಭಾಂಶ ನೀಡಿ ಅವರ ಹಿತ ರಕ್ಷಣೆಗೆ ಆದ್ಯತೆ ನೀಡಲಾಗಿದೆ. ಜತೆಗೆ ಬ್ಯಾಂಕಿನ ನೌಕರರಿಗೂ ಶೇ.20ರಷ್ಟು ಬೋನಸ್ ನೀಡಿ ಪ್ರೋತ್ಸಾಹಿಸಲಾಗುತ್ತಿದೆ.| ಡಾ.ಪ್ರಭಾಕರ ಕೋರೆ, ಸಂಸ್ಥಾಪಕ, ಡಾ.ಪ್ರಭಾಕರ ಕೋರೆ ಕೋ-ಆ್ ಕ್ರೆಡಿಟ್ ಸೊಸೈಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net