

ಮಲ್ಲಾಪುರ ಕೆ.ಎನ್: ಕಳೆದ ಕೆಲ ವರ್ಷಗಳಿಂದ ಸಂಭವಿಸುತ್ತಿರುವ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಸಮರ್ಪಕ ಬೆಲೆ ಸಿಗದೆ ನಿರಂತರವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಕೃಷಿಗಾಗಿ ಮಾಡಿದ ಸಾಲವನ್ನೂ ತೀರಿಸಲಾಗುತ್ತಿಲ್ಲ. ಇಂತಹ ದಯನೀಯ ಸ್ಥಿತಿಯಲ್ಲೂ ನೇಸರಗಿ ಭಾಗದ ರೈತರು ಗಜ್ಜರಿ ಕೃಷಿ ಆರಂಭಿಸಿದ್ದು, ಕೊಂಚ ನಿರಾಳರಾಗಿದ್ದಾರೆ.
ನೀರಾವರಿ ಬೆಳೆಯಾಗಿರುವ ಗಜ್ಜರಿ, ಒಣ ಬೇಸಾಯದ ಮೂಲಕವೂ ಉತ್ತಮ ಫಸಲು ಬರುತ್ತಿದೆ. ಹೀಗಾಗಿ ಈ ಭಾಗದ ರೈತರು ಗಜ್ಜರಿ ಬೆಳೆಯುವಲ್ಲಿ ಆಸಕ್ತರಾಗಿದ್ದಾರೆ. ನೇಸರಗಿ ಹೋಬಳಿಯ ಕೃಷಿ ಇಲಾಖೆ ವ್ಯಾಪ್ತಿಯ 44 ಹಳ್ಳಿಗಳಲ್ಲಿ ಒಟ್ಟು 28,387.23 ಹೆಕ್ಟೇರ್ ಕೃಷಿ ಪ್ರದೇಶವಿದ್ದು, ಇದರಲ್ಲಿ ತೋಟಗಾರಿಕೆ ಇಲಾಖೆಯ ಸುಮಾರು 180 ಹೆಕ್ಟೇರ್ ಪ್ರದೇಶದಲ್ಲಿ ಹಲವು ಗ್ರಾಮಗಳ ರೈತರು ಗಜ್ಜರಿ ಬೆಳೆದು ಆದಾಯ ಕಂಡುಕೊಂಡಿದ್ದಾರೆ.
ಹೈಬ್ರಿಡ್ ಗಜ್ಜರಿ: ನೇಸರಗಿ ಹೋಬಳಿ ಭಾಗದಲ್ಲಿ ಸೋಯಾಬಿನ್ ಪ್ರಧಾನ ಬೆಳೆಯಾಗಿದ್ದು, ಸುಮಾರು 15,920.05 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುತ್ತದೆ. ಆದರೆ, ಸೋಯಾಬಿನ್‌ಗಿಂತಲೂ ಗಜ್ಜರಿ ಬೆಳೆಯಲ್ಲಿಯೇ ಹೆಚ್ಚಿನ ಆದಾಯ ಸಿಗುವುದರಿಂದ ರೈತರು ಗಜ್ಜರಿಯನ್ನೇ ನೆಚ್ಚಿಕೊಂಡಿದ್ದಾರೆ. ಹಿಂದಿನಿಂದಲೂ ಕೆಲ ಗ್ರಾಮಗಳಲ್ಲಿ ಜವಾರಿ ಗಜ್ಜರಿ ಬೆಳೆಯುತ್ತಿದ್ದರು. ಆದರೆ, ಈಗ ಒಣ ಬೇಸಾಯದಲ್ಲೂ ಬೆಳೆಯಬಹುದಾದ ಹೈಬ್ರಿಡ್ ಗಜ್ಜರಿ ಬೆಳೆಯತೊಡಗಿದ್ದಾರೆ.
ಭಾರಿ ಬೇಡಿಕೆ: ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಮುಖಾಂತರ ನೆರೆಯ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ವಿಜಯಪುರ, ಬಾಗಲಕೋಟೆ, ಧಾರವಾಡ, ಚಿಕ್ಕಮಗಳೂರ, ದಾವಣಗೆರೆ,ಉಡುಪಿ, ಬೆಂಗಳೂರು, ಬಳ್ಳಾರಿ, ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇಲ್ಲಿ ಬೆಳೆಯುವ ಗಜ್ಜರಿಗೆ ಭಾರಿ ಬೇಡಿಕೆ ಇದ್ದು, ರ‌್ತಾಗುತ್ತಿದೆ.
ಮುಂಗಾರು ಹಾಗೂ ಹಿಂಗಾರು ಎರಡೂ ಅವಧಿಯಲ್ಲಿ ಈ ಹೈಬ್ರಿಡ್ ಗಜ್ಜರಿ ಬೆಳೆಯಬಹುದಾಗಿದೆ. ಮುಂಗಾರಿನಲ್ಲಿ ಅತಿ ಮಳೆಯಾದರೆ, ಕಡಿಮೆ ಇಳುವರಿಯಾಗುವ ಸಾಧ್ಯತೆ ಇರುತ್ತದೆ. ವಿಶೇಷವಾಗಿ ಮುಂಗಾರು ಹಂಗಾಮಿನಲ್ಲಿ ಬೆಳೆದರೆ ಗಡ್ಡೆಗಳಿಗೆ ಗೊರಲಿ ಹುಳು ತಿನ್ನುವುದು ಬಿಟ್ಟರೆ, ಬೆಳೆಗೆ ಅಂತಹ ಯಾವುದೇ ರೋಗ ಬಾಧಿಸದು. ಗಜ್ಜರಿ ಬಿತ್ತನೆ ಮಾಡಿದ ಮೂರು ತಿಂಗಳಲ್ಲಿ ಬೆಳೆ ಬರುತ್ತದೆ. ಎಕರೆಗೆ ಅಂದಾಜು 30 ರಿಂದ 40 ಕ್ವಿಂಟಲ್‌ವರೆಗೂ ಬೆಳೆ ಬರುತ್ತದೆ. ಸಾಮಾನ್ಯ ದಿನಗಳಲ್ಲಿ ಕ್ವಿಂಟಾಲ್ ಗಜ್ಜರಿಗೆ 2 ರಿಂದ 3 ಸಾವಿರ ರೂ. ದರ ಲಭಿಸುತ್ತದೆ. ವರ್ಷಕ್ಕೆ ಕನಿಷ್ಠ ಒಂದು ಬೆಳೆಗೆ 3ರಿಂದ 4 ಲಕ್ಷ ರೂ. ಆದಾಯ ಗಳಿಸಬಹುದು ಎನ್ನುತ್ತಾರೆ ಮದನಬಾವಿ ಎಪಿಎಂಸಿ ಸದಸ್ಯ ಬಿ.ಎ್. ಕೊಳದೂರ.
8 ವರ್ಷಗಳಿಂದ ಗಜ್ಜರಿ ಬೆಳೆ ಬೆಳೆಯುತ್ತಿದೇವೆ. ಉತ್ತಮ ಲಾಭ ಬರುವುದರಿಂದ ನಮಗೆ ಗೊತ್ತಿರುವ ರೈತರಿಗೂ ಸಹ ಗಜ್ಜರಿ ಬೆಳೆಯಲು ಹೇಳಲಾಗುತ್ತಿದೆ. ಕೆಲವೊಂದು ಗ್ರಾಮಗಳಲ್ಲಿ ರೈತರು ಗಜ್ಜರಿ ಬೆಳೆದು ಯಶಸ್ಸು ಸಹ ಕಂಡಿದ್ದಾರೆ. | ಮಲ್ಲೇಶಪ್ಪ ಮಾಳಣ್ಣವರ ಪ್ರಗತಿಪರ ರೈತರು, ನೇಸರಗಿನೇಸರಗಿ ವ್ಯಾಪ್ತಿಯ ಕೆಲವು ಆಯ್ದ ಗ್ರಾಮಗಳಲ್ಲಿ ರೈತರು ಒಣ ಬೇಸಾಯದಲ್ಲಿ ಗಜ್ಜರಿ ಬೆಳೆ ಬೆಳೆದು ಉತ್ತಮ ಆದಾಯ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಇತರ ರೈತರಿಗೆ ಮಾದರಿಯಾಗಿದ್ದಾರೆ.| ಪ್ರವೀಣ ಕುಲಕರ್ಣಿ ಸಹಾಯಕ ಕೃಷಿ ಅಧಿಕಾರಿಗಳು , ತೋಟಗಾರಿಕೆ ಇಲಾಖೆ, ನೇಸರಗಿ
| ಡಾ.ಮರಿಗೌಡ ಚೋಬಾರಿ, ಮಲ್ಲಾಪುರ ಕೆ.ಎನ್