

ಮಾಂಜರಿ: ಭೌತಿಕ ಸಿರಿ ಸಂಪತ್ತಿನಿಂದ ಮನುಷ್ಯನಿಗೆ ಶಾಂತಿ ಸಿಗದು. ಆದರ್ಶ ಮೌಲ್ಯಗಳ ಪರಿಪಾಲನೆಯಿಂದ ಬದುಕು ಬಲಗೊಳ್ಳಲು ಸಾಧ್ಯವಿದೆ. ಶಾಂತಿ, ಸುಖದ ಬದುಕಿಗೆ ಅಧ್ಯಾತ್ಮವೊಂದೇ ಆಶಾಕಿರಣ ಶ್ರೀಶೈಲ ಪೀಠದ ಜಗದ್ಗುರು ಹಾಗೂ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರಿನ ವೀರಭದ್ರ ದೇವಸ್ಥಾನ ಮತ್ತು ಕಾಡಸಿದ್ಧೇಶ್ವರ ಸಂಸ್ಥಾನ ಮಠದ ಧರ್ಮಾಧಿಕಾರಿ ಡಾ.ಚನ್ನ ಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸುಕ್ಷೇತ್ರ ಯಡೂರಿನ ವಿಶ್ವಗುರು ಬಸವೇಶ್ವರ ಲಿಂಗಾಯತ ಸಮಾಜ ಅಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಬಸವ ಜಯಂತಿ ನಿಮಿತ್ತ ಮೂರು ದಿನ ಕಾಲ ಆಯೋಜಿಸಲಾದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಹಾಗೂ ಸಂಘದ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಧನ, ಕನಕಾದಿ ವಸ್ತುಗಳು ಬಹಿರಂಗದ ಸಿರಿ. ಸತ್ಯ, ಶಾಂತಿ ಆಂತರಿಕ ಸಿರಿ. ಹೊರಗಿನ ಸಿರಿಯನ್ನು ಕಳ್ಳರು ಕದಿಯಬಹುದು. ಆದರೆ, ಅಂತರಂಗದ ಗುಣ ಸಿರಿಯನ್ನು ಯಾರೂ ಕದಿಯಲು ಸಾಧ್ಯವಿಲ್ಲ. ಸತ್ಯ-ಅಸತ್ಯ, ಧರ್ಮ-ಅಧರ್ಮ, ನ್ಯಾಯ-ಅನ್ಯಾಯ, ಪವಿತ್ರ-ಅಪವಿತ್ರ, ಒಳ್ಳೆಯದು-ಕೆಟ್ಟದ್ದನ್ನು ಬೇರ್ಪಡಿಸುವುದೇ ಅಧ್ಯಾತ್ಮ. ಒಳ್ಳೆಯದನ್ನು ಆಯ್ಕೆ ಮಾಡಿಕೊಳ್ಳುವವರು ಪರಮಾತ್ಮನಿಗೆ ಸಮೀಪವಿರುತ್ತಾರೆ. ಆದ್ದರಿಂದ ಪರಮಾತ್ಮನ ಪ್ರೀತಿ ಗಳಿಸಲು ಸಾಧ್ಯವಿದೆ ಎಂದು ಹೇಳಿದರು.
ರಾಜ ಯೋಗಿ ನಾಗಲಿಂಗ ಸ್ವಾಮೀಜಿ ಮಾತನಾಡಿ, ಭಗವಂತ ನೀಡಿದ ಸಂಪತ್ತು ಅಮೂಲ್ಯ. ನೆಲ, ಜಲ, ಬೆಂಕಿ ಗಾಳಿ ಬಯಲು ಕೊಟ್ಟ ಭಗವಂತನಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆ. ಜಗದ್ಗುರು ಹಾಗೂ ಸಾಧು-ಸಂತರ ಸಿದ್ಧಾಂತಗಳು ಬದುಕಿ ಬಾಳುವ ಮನುಷ್ಯನಿಗೆ ಉಜ್ವಲ ಬೆಳಕು ತೋರುತ್ತವೆ. ಮನುಷ್ಯನಿಗೆ ಮರೆವು-ಅರಿವು ಎರಡೂ ಇದೆ. ಮರೆಯುವುದು ಮನುಷ್ಯನ ಸ್ವಭಾವ. ಮರೆತು ಹೋದದನ್ನು ನೆನಪು ಮಾಡುವುದೇ ಗುರುವಿನ ಧರ್ಮವಾಗಿದೆ. ಎಂದರು.
ಬದುಕಲ್ಲಿ ದಾನ ಮಾಡಿ: ಚಿನ್ಮಯ ಸ್ವಾಮೀಜಿ ಬಾಳೇಕುಂದ್ರಿ ಮಾತನಾಡಿ, ಬದುಕಿನ ಜತೆಗೆ ದೇವರನ್ನು ಪ್ರೀತಿಸಬೇಕು. ಈ ಪ್ರಪಂಚದಲ್ಲಿ ಎಲ್ಲವೂ ಅಸ್ಥಿರ. ಸಾಮಾಜಿಕ ಕಲ್ಯಾಣ ಕಾರ್ಯ ಮಾತ್ರ ಶಾಶ್ವತ. ಸದಾಚಾರದಿಂದ ಬದುಕಬೇಕು. ದುಡಿದು ಊಟ ಮಾಡಬೇಕು. ಉಳಿದಿದ್ದರಲ್ಲಿ ದಾನ ಮಾಡಬೇಕು ಎಂದು ಹೇಳಿದರು.
ಈ ವೇಳೆ ಹೊಸದಾಗಿ ಸ್ಥಾಪಿಸಿರುವ ವಿಶ್ವಗುರು ಬಸವೇಶ್ವರ ಲಿಂಗಾಯತ ಸಮಾಜ ಅಭಿವೃದ್ಧಿ ಸಂಘವನ್ನು ಶ್ರೀಶೈಲ್ ಜಗದ್ಗುರುಗಳು ಉದ್ಘಾಟಿಸಿದರು. ಪ್ರಾಸ್ತಾವಿಕವಾಗಿ ಶಿವಾನಂದ ಹಂಜಿ ಮಾತನಾಡಿದರು. ಸಚಿನ ಪಾಟೀಲ್, ಪ್ರಮೋದ ಮಟಕರ, ಜಿನೇಂದ್ರ ಉಗಾರೆ, ತೇಜಗೌಡ ಪಾಟೀಲ್, ಅಮಿತ್ ಪಾಟೀಲ್, ಶ್ರೀನಾಥ ಪಾಟೀಲ್, ಗಜಾನನ ದಡ್ಡಿ, ಸಂತೋಷ ಹಕಾರೆ, ಈರಣ್ಣ ಅಮ್ಮನಿಗೆ, ಚಂದ್ರಕಾಂತ ಕಮತೆ, ಅಶೋಕ ಪಾಟೀಲ್, ಉತ್ತಮ ಅ, ಸಂತೋಷ ಪಾಟೀಲ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಅಪ್ಪಾಸಾಹೇಬ್ ಬೆಳವಿ, ನರಸಗೌಡ ಪಾಟೀಲ್, ಮಲ್ಲಯ್ಯ ಜಡೆ, ಶಿವಾನಂದ ಕರೋಶಿ, ಮಹೇಶ ಕಾಗವಾಡೆ, ರಾಜು ಹಕಾರೆ ಇತರರಿದ್ದರು. ಪರಶುರಾಮ ಪಾಟೀಲ್ ನಿರೂಪಿಸಿ, ವಂದಿಸಿದರು.