

ಬೆಳಗಾವಿ: ಬದುಕಿನ ಆವಿಷ್ಕಾರಗಳಿಗೆ ಆತ್ಮಸ್ಥೈರ್ಯವಿರಬೇಕು. ಕಠಿಣ ಪರಿಶ್ರಮದಿಂದ ನಿರಂತರ ಅಭ್ಯಾಸ, ಕಾರ್ಯಪರತೆಯಿಂದ ಯಶಸ್ಸು ಗಳಿಸಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ.ತ್ಯಾಗರಾಜ ಹೇಳಿದರು.
ನಗರದ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನೆರವೇರಿಸಿ ಅವರು ಮಾತನಾಡಿ, ಜಗತ್ತಿನ ಸಾಧಕರೆಲ್ಲರೂ ತಮ್ಮ ಪರಿಶ್ರಮದಿಂದ ಸಾಧಿಸಿ ಚಿರಪರಿಚಿತರಾಗಿದ್ದಾರೆ. ವಿದ್ಯಾರ್ಥಿಗಳು ತಮ್ಮನ್ನು ತಾವು ಪ್ರೀತಿಸಬೇಕು. ಒಳ್ಳೆಯ ಚಿಂತನೆಗಳನ್ನು ಮೈಗೂಡಿಸಿಕೋಳ್ಳಬೇಕು. ಗುರಿ ಮುಟ್ಟುವುದಕ್ಕಾಗಿ ನಿರಂತರ ಶ್ರಮಿಸಬೇಕು. ವಿದ್ಯಾರ್ಥಿಗಳು ಜೀವನದ ಪ್ರತಿಕ್ಷಣವನ್ನು ಆನಂದಿಸಬೇಕು ಹಾಗೂ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಬೇಕು ಎಂದರು. ತಂತ್ರಜ್ಞಾನದಿಂದ ವೇಗದ ಸ್ಫರ್ಧೆ ನಿರ್ಮಾಣವಾಗುತ್ತಿದೆ. ಆ ವೇಗದ ಸ್ಫರ್ಧೆಗೆ ನಾವು ತಯಾರಾಗಬೇಕು. ಮಾನವನ ಬದುಕಿಗೆ ಹಲವು ಸವಾಲುಗಳು ಎದುರಾಗುತ್ತಿದ್ದು, ಆ ಸವಾಲುಗಳನ್ನು ನಾವು ಎದುರಿಸಬೇಕು. ಅದಕ್ಕೆ ಅಗತ್ಯ ತಂತ್ರಜ್ಞಾನ ಬಳಕೆ, ಪುಸ್ತಕ ಪ್ರೀತಿ, ಸಮಾಜ ಪ್ರೇಮ ಅಗತ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಾ.ಎಚ್.ಎಸ್. ಮೇಲಿನಮನಿ ಮಾತನಾಡಿ, ಶಿಕ್ಷಕರಿಗೆ ಗೌರವ ಬರುವುದು ವಿದ್ಯಾರ್ಥಿಗಳು ತನಗಿಂತ ಎತ್ತರಕ್ಕೆ ಬೆಳೆದು ಸಾಧನೆ ಮಾಡಿದಾಗ. ಅವರ ಈ ಸಾಧನೆ ನಿರಂತರವಾಗಿರಲಿ ಎಂದರು.
ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ. ರಾಮಾ ರಾವ್, ಹಿರಿಯ ಸಹಾಯಕ ಪ್ರಾಧ್ಯಾಪಕ ಡಾ. ಜಿಎನ್. ಶೀಲಿ, ಡಾ. ರಾಘವೇಂದ್ರ ಹಜಗೋಳಕರ, ವಿನಾಯಕ ವರುಟೆ, ಲಕ್ಷ್ಮೀ ಶಿವಣ್ಣವರ ಹಾಗೂ ಮಹಾವಿದ್ಯಾಲಯದ ಸಿಬ್ಬಂದಿ ಇದ್ದರು. ಸ್ಫೂರ್ತಿ ಹಲಕಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ವಿ.ಪಿ. ಹಿರೇಮಠ ಸ್ವಾಗತಿಸಿದರು. ಸಿದ್ದನಗೌಡ ಪಾಟೀಲ ನಿರೂಪಿಸಿದರು. ನಿಕಿತಾ ಬೆದರೆ ವಂದಿಸಿದರು.