

ಯರಗಟ್ಟಿ: ಪಟ್ಟಣದಲ್ಲಿ ವಿಜದಶಮಿ ಉತ್ಸವದ ನಿಮಿತ್ತ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣವೇಷಧಾರಿಗಳಿಂದ ಭಾನುವಾರ ಪಥಸಂಚಲನ ಜರುಗಿತು.
ತೆರೆದ ವಾಹನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ ಡಾ. ಹೆಡಗೆವಾರ, ಸರಸಂಘಚಾಲಕ ಗುರುಜಿ ಭಾವಚಿತ್ರ ಹಾಗೂ ಭಗವಾ ಧ್ವಜ ಭವ್ಯ ನಡೆಯಿತು. ಮಾರ್ಗದುದ್ದಕ್ಕೂ ರಂಗೋಲಿ, ಹೂವಿನ ಅಲಂಕಾರ, ಕೇಸರಿ ಧ್ವಜ ಹಾಗೂ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.
ಆರ್‌ಎಸ್‌ಎಸ್ ವಕ್ತಾರ ರಾಮಚಂದ್ರ ಏಡಕೆ ಮಾತನಾಡಿ, ಭಾರತಕ್ಕಾಗಿ ಬದುಕುವ ದಿಟ್ಟ ಉದ್ದೇಶದಿಂದ ಸಂಘ ಸ್ಥಾಪನೆಯಾಯಿತು. ಸದ್ಯ ಸಂಘಕ್ಕೆ 98 ವರ್ಷವಾದರೂ ಅದೇ ತಳಹದಿಯಲ್ಲಿ ಅತ್ಯಂತ ಶಿಸ್ತುಬದ್ಧ ಹಾಗೂ ಜಾತಿ ಭೇದವಿಲ್ಲದೆ ಮುನ್ನಡೆಯುತ್ತಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಮುಕ್ತಾನಂದ ಸ್ವಾಮೀಜಿ ಮಾತನಾಡಿ, ವಿಕೃತ ಮನಸ್ಸಿನ ಕೆಲ ರಾಜಕಾರಣಿಗಳು ಸನಾತನ ಧರ್ಮದ ಮೂಲ ತತ್ತ್ವ ಸಿದ್ಧಾಂತ ನಾಶಪಡಿಸುವ ಪ್ರವೃತ್ತಿ ಹೊಂದಿದ್ದಾರೆ ಎಂದರು.
ನಿವೃತ್ತ ಶಿಕ್ಷಕ ಚವಡಪ್ಪನವರ, ವಿರೂಪಾಕ್ಷ ಮಾಮನಿ, ಅಜಿತಕುಮಾರ ದೇಸಾಯಿ, ಡಾ. ಕೆ.ವಿ. ಪಾಟೀಲ, ವಿಠ್ಠಲ ಬಂಟನೂರ, ಮಹಾಂತೇಶ ಜಕಾತಿ, ಮೋಹನ ಹಾದಿಮನಿ ಇತರರು ಇದ್ದರು.