ಹುಬ್ಬಳ್ಳಿ-ಪುಣೆ ಟ್ರೖೆ ವೀಕ್ಲಿ ವಂದೇ ಭಾರತ್ ರೈಲಿಗೆ ಸೆ. 16ಕ್ಕೆ ಚಾಲನೆ

New VB New
Published on

ಹುಬ್ಬಳ್ಳಿ : ಹುಬ್ಬಳ್ಳಿ-ಪುಣೆ ಮಧ್ಯೆ ಟ್ರೖೆ ವೀಕ್ಲಿ ವಂದೇ ಭಾರತ್ ರೈಲು ಸಂಚಾರ ಪ್ರಾರಂಭಿಸುವ ಕುರಿತು ನೈಋತ್ಯ ರೈಲ್ವೆ ವಲಯ ಶುಕ್ರವಾರದಂದು ಅಧಿಕೃತ ಪ್ರಕಟಣೆ ಹೊರಡಿಸಿದೆ.

ಎಸ್​ಎಸ್​ಎಸ್ ಹುಬ್ಬಳ್ಳಿ- ಪುಣೆ -ಎಸ್​ಎಸ್​ಎಸ್ ಹುಬ್ಬಳ್ಳಿ ಮಧ್ಯೆ ಸಂಚರಿಸುವ ಈ ರೈಲು ಎರಡು ವಾಣಿಜ್ಯ ಮಹಾನಗರಗಳನ್ನು ಸಂರ್ಪಸುವ ಕೊಂಡಿಯಾಗಿದೆ.

ಸೆ. 16ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಂದೇ ಭಾರತ್ ರೈಲು ಸಂಚಾರಕ್ಕೆ ವರ್ಚ್ಯುವಲ್ ಮೂಲಕ ಚಾಲನೆ ನೀಡುವರು. ಅಂದು ಈ ರೈಲು ಪುಣೆಯಿಂದ ಮಧ್ಯಾಹ್ನ 4.15ಕ್ಕೆ ಹೊರಟು, ರಾತ್ರಿ 11.40ಕ್ಕೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ. ಅಂದು ಈ ರೈಲು ಮೀರಜ್ (ರಾತ್ರಿ 7.15/7.20), ಬೆಳಗಾವಿ (9/9.10) ಮತ್ತು ಧಾರವಾಡ (11.05/11.10) ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ. ಉದ್ಘಾಟನಾ ಸಮಯದಲ್ಲಿ ಸಂಚರಿಸುವ ಈ ರೈಲು ಒಟ್ಟು 8 ಬೋಗಿಗಳನ್ನು ಒಳಗೊಂಡಿದೆ.

ಸೆ. 18 ರಿಂದ ಈ ರೈಲು ವಾರದಲ್ಲಿ ಮೂರು ದಿನ ಸಂಚರಿಸಲಿದೆ. ಸೆ. 18 ರಿಂದ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹಾಗೂ ಸೆ. 19 ರಿಂದ ಪುಣೆಯಿಂದ ನೂತನ ವಂದೇ ಭಾರತ್ ರೈಲು ಸಂಚರಿಸಲಿದೆ.

ಪ್ರತಿ ಬುಧವಾರ, ಶುಕ್ರವಾರ ಮತ್ತು ಭಾನುವಾರದಂದು ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಬೆಳಗಿನಜಾವ 5 ಗಂಟೆಗೆ ಹೊರಡುವ ರೈಲು, ಅದೇ ದಿನ ಮಧ್ಯಾಹ್ನ 1.30ಕ್ಕೆ ಪುಣೆ ತಲುಪಲಿದೆ.

ಪ್ರತಿ ಗುರುವಾರ, ಶನಿವಾರ ಮತ್ತು ಸೋಮವಾರ ಪುಣೆಯಿಂದ ಮಧ್ಯಾಹ್ನ 2.15ಕ್ಕೆ ಹೊರಡುವ ರೈಲು, ಅದೇ ದಿನ ರಾತ್ರಿ 10.45ಕ್ಕೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ.

ಧಾರವಾಡ, ಬೆಳಗಾವಿ, ಮೀರಜ್, ಸಾಂಗ್ಲಿ ಮತ್ತು ಸತಾರಾ ನಿಲ್ದಾಣಗಳಿಗೆ ಈ ವಂದೇ ಭಾರತ್ ರೈಲಿಗೆ ನಿಲುಗಡೆ ಸೌಲಭ್ಯ ಒದಗಿಸಲಾಗಿದೆ.

ಈ ರೈಲು ಒಟ್ಟು 8 ಬೋಗಿಗಳೊಂದಿಗೆ ಸಂಚರಿಸಲಿದ್ದು, ಇದರಲ್ಲಿ 52 ಎಕ್ಸಿಕ್ಯೂಟಿವ್ ಕ್ಲಾಸ್ ಸೀಟ್​ಗಳು ಮತ್ತು 478 ಚೇರ್ ಕಾರ್ ಸೀಟುಗಳು ಇರಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net