

ಮಸ್ಕಿ: ರಾಜ್ಯ ಸರ್ಕಾರದಲ್ಲಿ ಭ್ರಷ್ಟ್ಟಾಚಾರ ಮಿತಿ ಮೀರಿದೆ. ಯಾವುದೇ ಇಲಾಖೆಯಲ್ಲಿ ಸಾರ್ವಜನಿಕರ ಕೆಲಸವಾಗಬೇಕಾದರೆ ಲಂಚ ಕೊಡಬೇಕಾದ ವಾತಾವರಣವಿದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಶಾಸಕ ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಅವರು ವಸತಿ ಯೋಜನೆಯಲ್ಲಿ ಮನೆ ಹಂಚಿಕೆಗೆ ಹಣ ನೀಡುವಂತಹ ಪ್ರಸಂಗ ಸೃಷ್ಟಿಯಾಗಿದೆ ಎಂದು ಹೇಳಿರುವುದು ಸರ್ಕಾರದ ಭ್ರಷ್ಟಾಚಾರ ಮಿತಿಮೀರಿರುವುದಕ್ಕೆ ಸಾಕ್ಷಿ. ಮಸ್ಕಿ ಕ್ಷೇತ್ರದಲ್ಲಿ ಹಾಲಾಪುರ, ತಲೇಖಾನ್, ಗೌಡನಬಾವಿ, ಮೆದಕಿನಾಳ ಗ್ರಾಮಗಳಲ್ಲಿ ತಲಾ 200 ಮನೆಗಳು ಮಂಜೂರಾಗಿವೆ.
ಆದರೆ, ಕಾಂಗ್ರೆಸ್ ಕಾರ್ಯಕರ್ತರು ಒಂದು ಮನೆ ಹಂಚಿಕೆಗೆ ಫಲಾನುಭವಿಗಳಿಂದ 15-20 ಸಾವಿರ ರೂ. ಪಡೆಯುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ಕೂಡಲೇ ತನಿಖೆ ನಡೆಸಬೇಕು. ಅರ್ಹ ಫಲಾನುಭವಿಗಳು ಮನೆ ಹಂಚಿಕೆಯಾಗಬೇಕು. ಜನರು ಹಣ ನೀಡದೆ ಕೆಲಸ ಮಾಡಿಸಿಕೊಳ್ಳಬೇಕು ಎಂದರು.
ತಾಲೂಕಿನಲ್ಲಿ ಮನೆ ಹಂಚಿಕೆ ತಿಕ್ಕಾಟದಿಂದಾಗಿ ತಾಪಂ ಅಧಿಕಾರಿಗಳು ಮತ್ತು ಪಿಡಿಒಗಳು ಗೊಂದಲಕ್ಕೆ ಬಿದ್ದಿದ್ದಾರೆ. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ವಸತಿ ಯೋಜನೆ ನೇರವಾಗಿ ತಾಪಂಗೆ ಬರುತ್ತಿದ್ದು ಅರ್ಹ ಫಲಾನುಭವಿಗಳನ್ನು ಅಧಿಕಾರಿಗಳು ಗುರುತಿಸಿ ಮನೆ ಹಂಚಿಕೆ ಮಾಡಬೇಕು ಎಂದು ತಿಳಿಸಿದರು.