ಹಿಂದುತ್ವಕ್ಕಾಗಿ ಹೋರಾಡುವವರಿಗೆ ಮತ ಕೊಡಲಿ

07Jaggu 5-web
ಬೆಳಗಾವಿ ತಾಲೂಕಿನ ಉಚಗಾವಿಯಲ್ಲಿ ಭಾನುವಾರ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ ಜಾಧವ ಮಿತ್ರ ಪರಿವಾರ ಆಯೋಜಿಸಿದ್ದ 27ನೇ ಹಿಂದು ಕಾರ್ಯಕರ್ತರ ಸಮಾವೇಶದಲ್ಲಿ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಮಾತನಾಡಿದರು. ಶಾಸಕ ಅಭಯ ಪಾಟೀಲ ಇತರರಿದ್ದರು.
Published on

ಬೆಳಗಾವಿ: ಕಾಂಗ್ರೆಸ್‌ನವರೇ ಈ ದೇಶ ಒಡೆದು ಛಿದ್ರಗೊಳಿಸಿದ್ದಾರೆ. ಹಿಂದೂಸ್ತಾನವನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ದೂರಿದರು.

ತಾಲೂಕಿನ ಉಚಗಾವಿಯಲ್ಲಿ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ ಜಾಧವ ಮಿತ್ರ ಪರಿವಾರ ಭಾನುವಾರ ಹಮ್ಮಿಕೊಂಡಿದ್ದ 27ನೇ ಹಿಂದು ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ಹಿಂದು ರಾಷ್ಟ್ರ ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸಬೇಕು. ಹಿಂದುತ್ವಕ್ಕಾಗಿ ಹೋರಾಡುವವರಿಗೆ ಮುಂದಿನ ಚುನಾವಣೆಗಳಲ್ಲಿ ಮತ ಕೊಡಬೇಕು ಎಂದರು.

ಹಿಂದು ಧರ್ಮದ ಬಗ್ಗೆ ಜಾಗೃತಿ ಮೂಡಿಸಬೇಕೆಂಬ ಆಸೆ ಸ್ವತಃ ಕಾಂಗ್ರೆಸ್ಸಿಗರಿಗೂ ಇದೆ. ಆದರೆ, ಮುಸ್ಲಿಮರ ಮತ ಕೈತಪ್ಪಬಾರದೆಂದು ಸುಮ್ಮನಿದ್ದಾರೆ. ಮುಸ್ಲಿಮರ ಓಲೈಕೆಗಾಗಿ ತುಷ್ಟೀಕರಣ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಶಾಸಕ ಅಭಯ ಪಾಟೀಲ ಮಾತನಾಡಿ, ಯಾವುದೇ ಪ್ರಕರಣದಲ್ಲಿ ಕಾಂಗ್ರೆಸ್ ಬೆಂಬಲಿತರು ತಪ್ಪು ಮಾಡಿದರೆ ಕ್ರಮವಾಗುತ್ತಿಲ್ಲ. ಆದರೆ, ದುರುದ್ದೇಶದಿಂದ ಹಿಂದು ಕಾರ್ಯಕರ್ತರನ್ನು ಬಂಧಿಸುತ್ತಿರುವ ಸರ್ಕಾರದ ಧೋರಣೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಈಗ ಅಯೋಧ್ಯೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನಿಸುತ್ತಿಲ್ಲ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಆದರೆ, ರಾಮ ಮಂದಿರ ನಿರ್ಮಾಣಕ್ಕೆ ಇವರೇನೂ ಕೊಡುಗೆ ಕೊಟ್ಟಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾಗುವವರೆಗೆ ಮಂದಿರದ ನಿರ್ಮಾಣ ಕೆಲಸ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಕೆಟ್ಟು ಹೋಗಿದೆ. ಇಡೀ ರಾಜ್ಯ ಬರದಿಂದ ತತ್ತರಿಸಿದ್ದು, ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ ಎಂದು ವಾಗ್ದಾಳಿ ನಡೆಸಿದರು. ಮೇಯರ್ ಶೋಭಾ ಸೋಮನಾಚೆ, ಉಪಮೇಯರ್ ರೇಷ್ಮಾ ಪಾಟೀಲ, ಧನಂಜಯ ಜಾಧವ ಇತರರಿದ್ದರು.

ಸರ್ಕಾರಕ್ಕೆ ಗೋಹತ್ಯೆ ನಿಷೇಧ ಹಿಂಪಡೆಯಲು ಬಿಡಲಾರೆವು

ಬೆಳಗಾವಿ: ನಾವು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಿದ್ದೇವೆ. ಅದನ್ನು ಹಿಂದಕ್ಕೆ ಪಡೆಯಲು ಯಾವ ಕಾರಣಕ್ಕೂ ಬಿಡುವುದಿಲ್ಲ. ತಾಕತ್ತಿದ್ದರೆ ಗೋಹತ್ಯೆ ನಿಷೇಧ ಕಾಯ್ದೆ ಹಿಂದಕ್ಕೆ ಪಡೆಯಿರಿ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಸವಾಲು ಹಾಕಿದರು.

ನಮಗೆ ನರೇಂದ್ರ ಮೋದಿ ಅವರಂತಹ ಪ್ರಧಾನಿ ಬೇಕೆಂದು ಪಾಕಿಸ್ತಾನದವರೇ ಬಯಸುತ್ತಿದ್ದಾರೆ. ಆದರೆ, ಭಾರತದಲ್ಲಿರುವ ಕೆಲ ಮುಸ್ಲಿಮರು ಯಾವುದೋ ಗುಂಪಿನಲ್ಲಿದ್ದಾಗ ಪಾಕಿಸ್ತಾನಕ್ಕೆ ಜೈ ಎನ್ನುತ್ತಾರೆ. ಧೈರ್ಯವಿದ್ದರೆ ಹೊರಗೆ ಬಂದು ಬಹಿರಂಗವಾಗಿ ಆ ದೇಶಕ್ಕೆ ಜೈ ಎನ್ನಿ. ನಮ್ಮ ಕಾರ್ಯಕರ್ತರು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಗುಡುಗಿದರು.

ಅಯೋಧ್ಯೆ ಮಾದರಿಯಲ್ಲಿ ದೇಶದಲ್ಲಿ ಇನ್ನೆರಡು ದೇವಸ್ಥಾನಗಳ ನಿರ್ಮಾಣಕ್ಕೆ ನ್ಯಾಯಾಲಯ ಆದೇಶ ಕೊಟ್ಟಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಒಡೆದು ಬಾಬರಿ ಮಸೀದಿ ಕಟ್ಟಿದಂತೆ, ಈಗ ದೇವಸ್ಥಾನ ಒಡೆದು ಮಸೀದಿ ಕಟ್ಟಲು ಯಾರಿಗಾದರೂ ಧೈರ್ಯವಿದೆಯೇ? ಹಿಂದು-ಮುಸ್ಲಿಮರು ಅನ್ಯೋನ್ಯವಾಗಿರಬೇಕು ಎಂದು ನಾವೂ ಬಯಸುತ್ತೇವೆ. ಅಧಿಕೃತವಾಗಿ ಕಟ್ಟಿರುವ ಮಸೀದಿಗಳಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಲಿ. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ದೇಶದಲ್ಲಿ ದೇವಸ್ಥಾನ ಒಡೆದು ಕಟ್ಟಿರುವ ಮಸೀದಿಗಳನ್ನು ಮುಸ್ಲಿಮರು ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಬೇಕು. ಇಲ್ಲದಿದ್ದರೆ ರಾಮನ ಭಕ್ತರು ಅವುಗಳನ್ನು ಒಡೆದು ಹಾಕಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net