

ಸಿರಿಗೇರಿ: ಆಧುನಿಕ ಕೃಷಿ ಪದ್ಧತಿಯಿಂದ ಆಹಾರ ವಿಷಮಯವಾಗುತ್ತಿದೆ ಎಂದು ಕೃಷಿ ಮೇಲ್ವಿಚಾರಕ ವೀರೇಶ ಹೇಳಿದರು.
ದಾಸಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸೋಮವಾರ ಆಯೋಜಿಸಿದ್ದ ಕೃಷಿ ವಿಸ್ತರಣಾ ಕಾರ್ಯಕ್ರಮದಡಿ ಸಿರಿಧಾನ್ಯ ಬೇಸಾಯದ ತರಬೇತಿ ಉದ್ಘಾಟಿಸಿ ಮಾತನಾಡಿದರು. ವಿಷಮುಕ್ತ ಹಾಗೂ ಆರೋಗ್ಯ ಪೂರ್ಣ ಆಹಾರವನ್ನು ಬೆಳೆಯುವುದು ಮತ್ತು ಸೇವಿಸುವುದನ್ನು ಪ್ರೋತ್ಸಾಹಿಸಲು ಏಳು ವರ್ಷಗಳ ಹಿಂದೆಯೇ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಸಿರಿಮಿಲ್ಲೆಟ್ ಘಟಕವನ್ನು ಧಾರವಾಡದ ರಾಯಪುರದಲ್ಲಿ ಆರಂಭಿಸಲಾಗಿದೆ ಎಂದರು.
ಕೊಪ್ಪಳ, ದಾವಣಗೆರೆ ಮತ್ತು ಚಿಕ್ಕನಾಯಕನಹಳ್ಳಿಯಲ್ಲಿ ಸಿರಿಧಾನ್ಯಗಳನ್ನು ಸಾವಯವ ಪದ್ಧತಿಯಲ್ಲಿ ಬೆಳೆಯುವ ರೈತರೇ ಷೇರುದಾರ ಸದಸ್ಯರಾಗಿರುವ ರೈತ ಉತ್ಪಾದಕ ಕಂಪನಿಗಳನ್ನು ಸ್ಥಾಪಿಸಿ ಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹ, ಸಹಾಯ-ಸಹಕಾರ ಮತ್ತು ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ಗ್ರಾಪಂ ಸದಸ್ಯರಾದ ರುದ್ರಪ್ಪ, ರೈತ ಮುಖಂಡರಾದ ಗುರುಪುತ್ರ, ಬಗ್ಗಿ ನಾಗರಾಜ, ಬಗ್ಗುರಪ್ಪ, ಚಿದಾನಂದ, ಕೋರಿ ದೊಡ್ಡಬಸವ, ಕಾಳಮ್ಮ,ಯರೆಪ್ಪ, ಕೃಷ್ಣ ಇತರರಿದ್ದರು.