

ಕಂಪ್ಲಿ: ನವರಾತ್ರಿ ನಿಮಿತ್ತ ಇಲ್ಲಿನ ವಿಶ್ವಕರ್ಮ ಸಮುದಾಯದ ಶ್ರೀ ಕಾಳಿಕಾ ಕಮಠೇಶ್ವರ ದೇವಸ್ಥಾನದಲ್ಲಿ ಶ್ರೀದೇವಿ ಮಹಾತ್ಮೆ ಪುರಾಣ ಪ್ರವಚನದೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಭಾನುವಾರ ಜರುಗಿದವು.
ಸ್ಥಳೀಯ ವಿಶ್ವಕರ್ಮ ಸಮಾಜ ಸಂಘದ ಕಾರ್ಯದರ್ಶಿ ಡಿ.ಮೌನೇಶ ಮಾತನಾಡಿ, ಕಳೆದ 67 ವರ್ಷಗಳಿಂದ ದಸರಾದಲ್ಲಿ ಶ್ರೀದೇವಿ ಪುರಾಣ ಪ್ರವಚನ ಹಮ್ಮಿಕೊಳ್ಳುತ್ತ ಬರಲಾಗಿದೆ. ಇದರಿಂದ ಸಮಾಜ, ಜನರಿಗೂ ಒಳಿತಾಗಿದೆ. ಶ್ರೀದೇವಿ ಪುರಾಣವನ್ನು ಭಕ್ತಿ, ನಿಷ್ಠೆಯಿಂದ ಪಠಿಸಿದಲ್ಲಿ ಇಷ್ಟಾರ್ಥಗಳು ಈಡೇರುತ್ತವೆ ಎಂದರು.
ವಿಶ್ವಕರ್ಮ ಮಹಿಳಾ ಮಂಡಳಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಡಿ.ಪೂಜಾ ಭರತ್, ಡಿ.ಜ್ಯೋತಿ, ಎ.ಅನುಷಾ, ಭಾರತಿ ಇತರರು ಆಕರ್ಷಕ ರಂಗೋಲಿ ಬಿಡಿಸಿ ಗಮನಸೆಳೆದರು. ಭರತನಾಟ್ಯ, ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಮಹಿಳಾ ಘಟಕದ ಅಧ್ಯಕ್ಷೆ ಡಿ.ವೀಣಾ, ಪದಾಧಿಕಾರಿಗಳಾದ ಶೀಲಾವತಿ, ಪೂಜಾ, ಸವಿತಾ, ಜಯಲಕ್ಷ್ಮೀ, ಕಲಾವತಿ, ಸಮಾಜದ ಸ್ಥಳೀಯ ಅಧ್ಯಕ್ಷ ಡಿ.ಎ.ರುದ್ರಪ್ಪಾಚಾರ್, ಕಾಳಾಚಾರಿ, ಚಂದ್ರಶೇಖರ್, ಶಶಿಧರ ಇತರರಿದ್ದರು.
ಶ್ರೀಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಕಲ್ಯಾಣ ಮಹೋತ್ಸವ: ಪಟ್ಟಣದ ಡಾ.ರಾಜಕುಮಾರ್ ಮುಖ್ಯರಸ್ತೆಯ ಶ್ರೀಲಕ್ಷ್ಮೀ ವೆಂಕಟೇಶ್ವರ ಸ್ವಾಮಿ(ಗುಡ್ಡದ ತಿಮ್ಮಪ್ಪ)ದೇವಸ್ಥಾನದಲ್ಲಿ ಸೋಮವಾರ ಶ್ರೀಲಕ್ಷ್ಮೀ ವೆಂಕಟೇಶ್ವರಸ್ವಾಮಿ ಕಲ್ಯಾಣ ಮಹೋತ್ಸವ ಜರುಗಿತು.
ಅರ್ಚಕ ಬೋಸಿ ಪಾಂಡುರಂಗಾಚಾರ್ ಕೃಷ್ಟಾಚಾರ್ ಪೌರೋಹಿತ್ಯವಹಿಸಿದ್ದರು. ಕಲ್ಯಾಣ ಮಹೋತ್ಸವ ನಿಮಿತ್ತ ಪಂಚಾಮೃತ ಅಭಿಷೇಕ, ಪುನುಗು ಅಭಿಷೇಕ, ಮಹಾಮಂಗಳಾರತಿ, ವಿವಿಧ ಪುಷ್ಪಾದಿಗಳ ಅಲಂಕಾರ, ಊಂಜಲ ಸೇವೆ, ಅನ್ನಸಂತರ್ಪಣೆ ಜರುಗಿತು. ಪ್ರಮುಖರಾದ ಎಂ.ಬಾಲವೆಂಕಟೇಶ್ವರಲು, ಡಿ.ಶ್ರೀಧರಶ್ರೇಷ್ಠಿ, ವಿ.ರಾಮಲಿಂಗಯ್ಯ ಇತರರಿದ್ದರು.