ನಿಮ್ಮ ಮುಷ್ಠಿಯಲ್ಲೇ ಇದೆ ಆರೋಗ್ಯ: ಸಿರಿಧಾನ್ಯ ಸೇವನೆಯಿಂದ ಅನೇಕ ಕಾಯಿಲೆಗಳಿಗೆ ಪರಿಹಾರ

Siridhanya
Published on

ಆರೋಗ್ಯ ಭಾಗ್ಯ ಎಂದು ಬಾಯಿಮಾತಿಗಷ್ಟೇ ಸೀಮಿತವಾಗಿ, ಹಣದ ಹಿಂದೆ ಓಡುವ ಮನುಷ್ಯ ಅನಾರೋಗ್ಯವನ್ನು ಮನೆಗೆ ತರುತ್ತಿದ್ದು, ಇದಕ್ಕೆ ಸಿರಿಧಾನ್ಯ ಸೇವನೆಯೇ ಪರಿಹಾರ ಎಂಬುದು ‘ಮಿಲೆಟ್ ಮ್ಯಾನ್’ ಎಂದೇ ಖ್ಯಾತರಾದ ಡಾ. ಖಾದರ್ ಅವರ ಸ್ಪಷ್ಟ ನುಡಿ. ‘ವಿಜಯವಾಣಿ’ ಹಾಗೂ ದಿಗ್ವಿಜಯ ನ್ಯೂಸ್ 247’ ವತಿಯಿಂದ ಬುಧವಾರ ಆಯೋಜಿಸಿದ್ದ ಕ್ಲಬ್​ಹೌಸ್ ಸಂವಾದದಲ್ಲಿ ಒಟ್ಟಾರೆ ಆರೋಗ್ಯ ಪರಿಕಲ್ಪನೆ, ಪಾಶ್ಚಾತ್ಯ ಅಂಧಾನುಕರಣೆಯಿಂದಾದ ಅಪಾಯ, ಇದರಲ್ಲಿ ವೈದ್ಯರು ಹಾಗೂ ವಿಜ್ಞಾನಿಗಳ ಪಾತ್ರ, ಜನರು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿಸõತವಾಗಿ ಮಾತನಾಡಿದ್ದಲ್ಲದೆ, ಜನರ ಪ್ರಶ್ನೆಗಳಿಗೆ ಉತ್ತರಿಸಿದರು.

ಅಮೆರಿಕದಲ್ಲಿ ದಿಗ್ಭ್ರಮೆ...

ಉನ್ನತ ವ್ಯಾಸಂಗ ಕೈಗೊಂಡು ಅಮೆರಿಕದಲ್ಲಿ ವಿಜ್ಞಾನಿಯಾಗಿ ನೌಕರಿಗೆ ತೆರಳಿದೆ. ಸಾಮಾನ್ಯವಾಗಿ 14-15 ವರ್ಷಕ್ಕೆ ಬಾಲಕಿಯರು ಪ್ರಾಯಕ್ಕೆ ಬರುತ್ತಾರೆ. ಆದರೆ ಅಮೆರಿಕದಲ್ಲಿ ಕೇವಲ ಆರು ವರ್ಷದ ಮಗುವನ್ನು ಈ ಸ್ಥಿತಿಯಲ್ಲಿ ಕಂಡು ದಿಗ್ಭŠಮೆಗೊಳಗಾದೆ. ಏಕೆ ಹೀಗಾಗುತ್ತದೆ ಎಂದು ಹುಡುಕುತ್ತಿರುವಾಗ, ಒಟ್ಟಾರೆ ಕಾಪೋರೇಟ್ ಕಂಪನಿಗಳ ಹುನ್ನಾರ ಬೆಳಕಿಗೆ ಬಂತು. ಪಾಶ್ಚಾತ್ಯ ಅಂಧಾನುಕರಣೆಯಿಂದ ನಮ್ಮ ದೇಶದಲ್ಲಿ ನಮಗೆ ಬೇಕಾಗಿದ್ದ ಪದಾರ್ಥಗಳನ್ನು ಬಿಟ್ಟು ಕಾಪೋರೇಟ್ ಕಂಪನಿಗಳು ನೀಡುವ ಗೋಧಿ, ಅಕ್ಕಿ, ಸಕ್ಕರೆ, ಮೊಟ್ಟೆ, ಮಾಂಸಗಳ ಮೇಲೆ ಅವಲಂಬಿತರಾಗಿದ್ದೇವೆ. ಪಾಶ್ಚಾತ್ಯ ಶಿಕ್ಷಿತ ಪೌಷ್ಟಿಕಾಂಶ ತಜ್ಞರು ನಮ್ಮನ್ನು ತಪು್ಪ ದಾರಿಯಲ್ಲಿ ಕೊಂಡೊಯ್ಯುತ್ತಿದ್ದಾರೆ ಎಂಬುದನ್ನು ಅಲ್ಲಿ ತಿಳಿದೆ. 10 ವರ್ಷ ಅಮೆರಿಕದಲ್ಲಿ ಸಂಶೋಧನೆ ವಿಭಾಗದಲ್ಲಿ ವಿಜ್ಞಾನಿಯಾಗಿದ್ದೆ. ಗೊಬ್ಬರ, ಕೀಟನಾಶಕ, ಕೃಷಿ ಸೇರಿ ಅನೇಕ ವಿಭಾಗಗಳಲ್ಲಿ ಕಾರ್ಯನಿರತನಾಗಿದ್ದೆ. ಇದನ್ನೆಲ್ಲ ನೋಡಿದ ಮೇಲೆ ನನಗೆ ಗೊತ್ತಾಗಿದ್ದು, ಕಾಪೋರೇಟ್ ಕಂಪನಿಗಳು ನಮ್ಮ ಆಹಾರವನ್ನು ನಮ್ಮಿಂದ ದೂರ ಮಾಡಿ, ಅವರು ಕಂಡುಹಿಡಿದ ಬೀಜ ಹಾಗೂ ಆಹಾರಗಳ ಮೇಲೆ ಅವಲಂಬಿತರಾಗಿ, ನಾವು ತಿನ್ನಬೇಕಾದ ಆಹಾರವನ್ನೂ ಅವರು ನಿಯಂತ್ರಿಸುತ್ತಿದ್ದಾರೆ. ಕಳೆದ 60-70 ವರ್ಷದಿಂದ ನಮ್ಮ ಆಹಾರ ಹಾಗೂ ಕೃಷಿಯ ನಿಯಂತ್ರಣವನ್ನು ಅವರ ಕೈಗೆ ಕೊಟ್ಟಿದ್ದೇವೆ. ನಾವದನ್ನು ಗಮನಿಸಲಾಗದಂತೆ ಮೂರ್ಖರಾಗಿಸಲು ವೈದ್ಯರ ಮೂಲಕ ಭ್ರಮೆ ಸೃಷ್ಟಿಸುತ್ತಿವೆ.

ಸಿರಿಧಾನ್ಯಕ್ಕೆ ಬೆಲೆ ಬಂದಿದೆ
ವಿಶ್ವದ 700 ಕೋಟಿ ಜನರಿಗೆ ಆಹಾರ ನೀಡಬೇಕೆಂದರೆ ಈ ತಂತ್ರಜ್ಞಾನ ಬೆಳೆಸಬೇಕು ಎಂದು ಕಂಪನಿಗಳು ಸುಳ್ಳು ಹೇಳುತ್ತಿದ್ದಾರೆ. ಜಲಾಶಯಗಳಿಗಾಗಿ ಜೀವವೈವಿಧ್ಯಗಳನ್ನು, ಆಹಾರ ಪದ್ಧತಿಯನ್ನು ನಿರ್ನಾಮ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ವರ್ಷಕ್ಕೆ 4 ಲಕ್ಷ ಟನ್ ಕಬ್ಬು ಬೆಳೆಯಲಾಗುತ್ತದೆ. ಇಷ್ಟು ಕಬ್ಬು ಬೆಳೆಯಲು ನೀಡುವಷ್ಟು ನೀರನ್ನು ನನಗೆ ನೀಡಿದರೆ ಇಡೀ ದಕ್ಷಿಣ ಭಾರತಕ್ಕೆ ಊಟ ಹಾಕಬಹುದು. ನಾನು ಅಮೆರಿಕದಿಂದ ಬಂದಾಗ ನವಣೆ ಅಕ್ಕಿಗೆ ಒಂದೆರಡು ರೂ. ನೀಡುತ್ತಿದ್ದರು. ಈಗ ಕರ್ನಾಟಕದ ಪ್ರತಿ ಹಳ್ಳಿಯಲ್ಲೂ ಸಿರಿಧಾನ್ಯ ಬೆಳೆಯುತ್ತಿದ್ದಾರೆ. ಉತ್ತಮ ಬೆಲೆ ಸಿಗುತ್ತಿದೆ. ಹಿಂದಿನ ಸರ್ಕಾರ ಮೂರು ವರ್ಷ ಸಿರಿಧಾನ್ಯ ಮೇಳ ಮಾಡಿತು. ಈಗ 2023ನೇ ಇಸವಿಯನ್ನು ಸಿರಿಧಾನ್ಯ ವರ್ಷ ಎಂದು ಘೋಷಣೆ ಮಾಡಲಾಗಿದೆ.

ವಿದೇಶಗಳಲ್ಲೂ ಸಿರಿಧಾನ್ಯ
ಸಿರಿಧಾನ್ಯಗಳನ್ನು ಭಾರತದಲ್ಲಿ ಮಾತ್ರ ಬೆಳೆಯುವುದಿಲ್ಲ. ನವಣೆ ಅಕ್ಕಿಯನ್ನು ಇಟಾಲಿಯನ್ ಮಿಲೆಟ್, ಕೊರ್ಲೆಯನ್ನು ಅಮೆರಿಕನ್ ಮಿಲೆಟ್, ಅರ್ಕವನ್ನು ಹಿಮಾಲಯನ್ ಮಿಲೆಟ್, ಊದಲನ್ನು ಜರ್ಮನ್ ಮಿಲೆಟ್ ಎನ್ನುತ್ತಾರೆ. ಅಂದರೆ ಪ್ರಪಂಚದ ಎಲ್ಲ ಕಡೆಗಳಲ್ಲೂ ಈ ಆಹಾರವನ್ನು ಸೇವಿಸಲಾಗುತ್ತಿತ್ತು. ತಮ್ಮ ಉದ್ಯಮದ ಲಾಭಕ್ಕಾಗಿ ಈ ಆಹಾರವನ್ನು ಗುರಿಯಾಗಿಸಿಕೊಂಡ ಕಂಪನಿಗಳು ನಿರ್ನಾಮ ಮಾಡಿದ್ದಾರೆ.

ಕರೊನಾದಿಂದಾಗಿ ಯಾರೂ ಮೃತರಾಗಿಲ್ಲ
ಮಧುಮೇಹ, ಕ್ಯಾನ್ಸರ್ ಸೇರಿ ಇನ್ನಿತರ ಕಾಯಿಲೆ ಇರುವವರನ್ನು(ಕೊ ಮಾರ್ಬಿಡ್)ಕರೊನಾ ಈ ವೈರಸ್ ಬಾಧಿಸುತ್ತಿದೆ. ಅಂದರೆ ಕಳೆದ ಅನೇಕ ದಶಕಗಳಿಂದ ರೋಗನಿರೋಧಕ ಶಕ್ತಿಯನ್ನು ಕಳೆದುಕೊಂಡು ಬರುತ್ತಿರುವುದರ ಫಲ ಇದು. ಕರೊನಾದಿಂದ ಅಲ್ಲ, ಬಹುತೇಕರು ರೋಗನಿರೋಧಕ ಶಕ್ತಿಯ ಕೊರತೆಯಿಂದ ನಿಧನರಾಗಿದ್ದಾರೆ. ಸಾಮೆ ತಿಂದಿದ್ದರೆ ಕರೊನಾ ಬರುತ್ತಿರಲಿಲ್ಲ.

ಭತ್ತ ಬೆಳೆಯಲು ಸಾಕಷ್ಟು ನೀರು
ಒಂದು ಕೆ.ಜಿ. ಸಿರಿಧಾನ್ಯ ಬೆಳೆಯಲು 300 ಲೀ. ನೀರು ಸಾಕು. ಆದರೆ, ಭತ್ತ ಬೆಳೆಯಲು 8 ಸಾವಿರ ಲೀಟರ್ ನೀರು ಬೇಕು. ಮಳೆಯಾಶ್ರಿತ ಭತ್ತ ಹಾಗೂ ಡ್ಯಾಂ ನೀರಿನಲ್ಲಿ ಬೆಳೆದ ಭತ್ತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಜಲಾಶಯದಲ್ಲಿರುವ ಲವಣಾಂಶಗಳು ಹೂಳಾಗಿ ಕೆಳಗೆ ಕೂರುತ್ತವೆ. ನೀರಿನಲ್ಲಿ ಸತ್ವ ಇರುವುದಿಲ್ಲ. ಇದಕ್ಕಾಗಿಯೇ ಕೃಷಿಯಲ್ಲಿ ರಾಸಾಯನಿಕ ಗೊಬ್ಬರ, ಕ್ರಿಮಿಕೀಟನಾಶಕ ಬಲಸಲಾಗುತ್ತಿದೆ. ಇದೆಲ್ಲವನ್ನೂ ವಿಜ್ಞಾನಿಗಳು ಮುಚ್ಚಿಟ್ಟು ಭೂಮಿ ತಾಯಿ ಮೇಲೆ ದೌರ್ಜನ್ಯ ಎಸಗಿ ನಿರ್ವೀಯರಾಗಿಸುತ್ತಿದ್ದಾರೆ.

# ಸಿರಿಧಾನ್ಯ ಸೇವನೆಯಿಂದ ಆರೋಗ್ಯ ಸಮಸ್ಯೆ ಬಗೆಹರಿದಿದ್ದು ಮತ್ತೆ ಅಕ್ಕಿ, ಗೋಧಿ ಸೇವಿಸಬಹುದು ಎಂದು ಅನೇಕರು ಕೇಳುತ್ತಾರಲ್ಲ...

ಸಾಮಾನ್ಯ ಆಹಾರ ಎಂದರೆ ಅಕ್ಕಿ, ಗೋಧಿ, ಹಾಲು, ಸಕ್ಕರೆ ಎನ್ನುವಂತಾಗಿದೆ. ಮತ್ತೆ ಅವನ್ನು ತಿಂದರೆ ರೋಗ ಬರುತ್ತದೆ. ಸಿರಿಧಾನ್ಯವೇ ನಿಜವಾದ ಆಹಾರ ಹಾಗೂ ಭವಿಷ್ಯದ ಆಹಾರ. ಇದು ಅತ್ಯಂತ ಸುಂದರ ಹಾಗೂ ವೈಜ್ಞಾನಿಕ ಆಹಾರ.

#ಮೂತ್ರದ ಸಮಸ್ಯೆ ಇದ್ದು ಯಾವ ಸಿರಿಧಾನ್ಯ ಉಪಯೋಗಿಸಬೇಕು? ಹೊಟ್ಟೆ ಉರಿಗೆ ಏನು ಪರಿಹಾರ?

ಮೂತ್ರಪಿಂಡ ರೋಗಗಳಿಗೆ ಊದಲು ಉತ್ತಮ ಫಲಿತಾಂಶ ನೀಡುತ್ತದೆ. ಮೂರು ತಿಂಗಳಲ್ಲಿ ಸಮಸ್ಯೆ ನಿವಾರಿಸಿಕೊಳ್ಳಬಹುದು. ಹೊಟ್ಟೆ ಉರಿಗೆ ಮುಖ್ಯವಾಗಿ ಗ್ಯಾಸ್ಟ್ರಿಕ್ ಕಾರಣ. ಸಿರಿಧಾನ್ಯವನ್ನು ರಾತ್ರಿ ನೆನೆಸಿ, ಬೆಳಗ್ಗೆ ಒಂದು ಲೋಟಕ್ಕೆ 10-15 ಲೋಟ ನೀರು ಹಾಕಬೇಕು. 10-15 ನಿಮಿಷ ಬೇಯಿಸಿದರೆ ಗಂಜಿ ಆಗುತ್ತದೆ. ಐದಾರು ಗಂಟೆ ಆದ ಮೇಲೆ ಹುಳಿ ಬಂದಿರುತ್ತದೆ. ಇದನ್ನು ಒಂದು ಲೋಟದಂತೆ ಆರು ವಾರ ಸೇವನೆ ಮಾಡಿದರೆ ಯಾವುದೇ ರೀತಿಯ ಹೊಟ್ಟೆ ಉರಿಯೂ ವಾಸಿಯಾಗುತ್ತದೆ.

ಔಷಧ ಕಂಪನಿಗಳ ಹುನ್ನಾರ
ನಾನು ಅಮೆರಿಕದಿಂದ ವಾಪಸಾಗುವ ವೇಳೆಗೇ ಭಾರತದಲ್ಲಿ ಮಧುಮೇಹ, ಆರ್ಥರೈಟಿಸ್, ಹಾಮೋನ್ ಅಸಮತೋಲನ, ಸ್ತನದಲ್ಲಿ ಗಡ್ಡೆಗಳು ಸೇರಿ ಅನೇಕ ಕಾಯಿಲೆಗಳು ಸೇರಿ ಅನೇಕ ಸಮಸ್ಯೆ ಬೆಳೆಯುತ್ತಲೇ ಇದ್ದವು. ವಿಶ್ವ ಮಟ್ಟದಲ್ಲಿ ಔಷಧ ಕಂಪನಿಗಳು ದೈತ್ಯಾಕಾರವಾಗಿ ಬೆಳೆದಿವೆ. ಆಹಾರದ ಜತೆಗೆ ಔಷಧ ಮಾರಾಟದ ಮಹಾಮಾರಿಯೂ ಬೆಳೆದಿದೆ. ಈ ನಡುವೆ ಆಯುರ್ವೆದದ ಅದ್ಭುತ ಚಿಕಿತ್ಸಾ ವಿಧಾನಗಳು ಕಣ್ಮರೆಯಾದವು. ಅಕ್ಕಿ, ಗೋಧಿ, ಸಕ್ಕರೆ ತಿನ್ನುವುದರಿಂದ ನಮಗೆ ಕಾಯಿಲೆ ಬರುತ್ತಿವೆ ಎಂದು ಯಾವ ಪೌಷ್ಟಿಕಾಂಶ ತಜ್ಞರೂ ಹೇಳುತ್ತಿಲ್ಲ ಎಂದರೆ, ಅದಕ್ಕೆ ಈ ಕಂಪನಿಗಳೇ ಕಾರಣ. ಇದರಿಂದಾಗಿ ಅನೇಕ ಅನುವಂಶೀಯ ಕಾಯಿಲೆಗಳಿಗೆ ಕಾರಣವಾಗುತ್ತಿವೆ. ನಮ್ಮ ದೇಶದ ಹಸುಗಳನ್ನು ತೆಗೆದುಕೊಂಡು ಒಂದು ಹಸುವಿನಿಂದ ನಿರಂತರ ಹಾಲು ಕೊಡುವಂತೆ ಮಾಡುವ ಕೆಲಸ ಪ್ರಗತಿ ಹೆಸರಿನಲ್ಲಿ ನಡೆದಿದೆ. ಕ್ಯಾಲ್ಶಿಯಂ ಸಿಗುತ್ತದೆ ಎಂದು ಸಂಸ್ಕರಿಸಿದ ಈ ಹಾಲುಗಳನ್ನು ಕುಡಿಸಲಾಗುತ್ತಿದೆ. ಇದರಿಂದ ಮಕ್ಕಳ ಹಾಮೋನ್ ಅಸಮತೋಲನಕ್ಕೆ ಕಾರಣವಾಗುತ್ತಿದೆ. ಈಗ ಎಲ್ಲ ದೇಶಗಳಲ್ಲೂ ಈ ಪರಿಣಾಮ ಗೋಚರಿಸುತ್ತಿದೆ. ಕಪು್ಪ ಎಳ್ಳಿನಿಂದ ಸಿಗುವಷ್ಟು ಕ್ಯಾಲ್ಶಿಯಂ ಹಾಲಿನಿಂದ ಸಿಗುವುದಿಲ್ಲ.

# ಎಪಿಲೆಪ್ಸಿ ಔಷಧ ಸೇವಿಸುತ್ತಿದ್ದೇವೆ. ಇದಕ್ಕೆ ಆಹಾರ ಕ್ರಮವೇನು?

ಫಿಟ್ಸ್ ಸಮಸ್ಯೆಗೆ ಸಿರಿಧಾನ್ಯ ಸೇವನೆಯಿಂದ ಆರು ತಿಂಗಳಲ್ಲಿ ಪರಿಹಾರ ಕಂಡುಕೊಳ್ಳಬಹುದು. ನಿಧಾನವಾಗಿ ಮಾತ್ರೆಗಳನ್ನು ಕೈಬಿಡಬಹುದು. ಲಕ್ಷಾಂತರ ಜನರು ಇದರಿಂದ ಉಪಯೋಗ ಪಡೆದುಕೊಂಡಿದ್ದಾರೆ.

# ಸಿರಿಧಾನ್ಯಕ್ಕೆ ಸರ್ಕಾರ ಪ್ರೋತ್ಸಾಹ ನೀಡಬಹುದಲ್ಲವೇ?

ಎಲ್ಲದ್ಕಕೂ ಸರ್ಕಾರದತ್ತ ಬೊಟ್ಟು ಮಾಡುವುದನ್ನು ಬಿಡಬೇಕು. ಮೊದಲು ನಮ್ಮಲ್ಲಿ ಬದಲಾವಣೆ ಆಗಬೇಕು. ನಾವು ಒತ್ತಾಯ ಮಾಡಿದರೆ ಸರ್ಕಾರಗಳು ಕೆಲಸ ಮಾಡುತ್ತವೆ ಅಥವಾ ಹಣಕ್ಕಾಗಿ ಕೆಲಸ ಮಾಡುತ್ತವೆ. ಹಣ ನೀಡಲು ಆಗುವುದಿಲ್ಲ, ಜನರು ಒತ್ತಡ ಹೇರುವುದರಿಂದ ಆಗುತ್ತದೆ. ಜನರಲ್ಲಿ ಜಾಗೃತಿ ಮೂಡಿಸಿದರೆ ಆಗುತ್ತದೆ ಎಂಬ ಆಶಯ ಇದೆ.

# ಆಧುನಿಕ ಆಹಾರ ಪದ್ಧತಿ ದುರಭ್ಯಾಸದಿಂದ ಹೊರಬಂದು ಶಿಸ್ತಿನ ಆರೋಗ್ಯ ಕ್ರಮಕ್ಕೆ ಒಗ್ಗಿಕೊಳ್ಳಲು ಸಾಧ್ಯವಾಗುವುದು ಹೇಗೆ?

ನೀವು 45 ವರ್ಷ ದಾಟಿದವರಾದರೆ ನಿಮ್ಮ ಕೈ ಮುಷ್ಟಿಯಷ್ಟು ಆಹಾರವನ್ನು ಸೇವಿಸಿ. 30-40 ವರ್ಷದವರಾದರೆ ಎರಡು ಹಿಡಿ ಬೇಕು. ಚಿಕ್ಕ ಮಕ್ಕಳಾದರೆ ಮುಷ್ಟಿಗಿಂತ ಹೆಚ್ಚು ಬೇಕು. ದ್ವಿದಳ ಧಾನ್ಯಗಳು ಅರ್ಧ ಹಿಡಿಯಷ್ಟು ಸಾಕು. ಮನೆಯಲ್ಲಿರುವವರೆಲ್ಲರನ್ನೂ ಒಂದೆಡೆ ಸೇರಿಸಿ. ಮೇಲೆ ತಿಳಿಸಿದಂತೆ ಅವರವರ ವಯೋಮಾನಕ್ಕೆ ತಕ್ಕಂತೆ ಮುಷ್ಟಿಯಷ್ಟು ಧಾನ್ಯವನ್ನು ಹಾಕಿಸಿ. ಒಟ್ಟು ಸೇರಿಸಿ ಅಳತೆ ಮಾಡಿಟ್ಟುಕೊಳ್ಳಿ. ಅಷ್ಟು ಆಹಾರವನ್ನು ಪ್ರತಿದಿನ ಅಡುಗೆಮಾಡಿ, ಹೊಟ್ಟೆ ತುಂಬುತ್ತದೆ. ಒಂದು ಧಾನ್ಯವನ್ನು ಎರಡೆರಡು ದಿನ ಸೇವಿಸಬೇಕು. ಆಹಾರದಲ್ಲಿ ವೈವಿಧ್ಯತೆ ಕಾಯ್ದುಕೊಳ್ಳಬೇಕು. ಒಂದೊಂದು ಸಿರಿಧಾನ್ಯ ಒಂದೊಂದು ಅಂಗವನ್ನು ಶುದ್ಧ ಮಾಡುತ್ತದೆ. ಮಿಲೆಟ್ ಮಿಕ್ಸ್ ಗಳಿಂದ ಉಪಯೋಗಕ್ಕಿಂತ ತೊಂದರೆಯಾಗುತ್ತದೆ. ಎಷ್ಟು ಸೇವಿಸಿದರೂ ಪ್ರಯೋಜನವಿಲ್ಲ.

# ವಿಟಮಿನ್ ಬಿ12 ಕೊರತೆಗೆ ಏನು ಮಾಡಬೇಕು?

ಸಿರಿಧಾನ್ಯ ಬಿಟ್ಟು ಪ್ರಪಂಚದ ಯಾವುದರಿಂದಲೂ ಬಿ12 ಕೊರತೆಗೆ ಪರಿಹಾರ ಸಾಧ್ಯವಿಲ್ಲ. ಮಾಂಸ ಅಥವಾ ಮೀನು ತಿನ್ನಬೇಕು ಎನ್ನುವುದು ಅವೈಜ್ಞಾನಿಕ ವಿಷಯ.

# ತಲಸ್ಸೇಮಿಯಾಕ್ಕೆ ಏನು ಪರಿಹಾರ?

ರಕ್ತದ ಕ್ಯಾನ್ಸರ್​ಗೆ ನೀಡಿರುವ ಪ್ರೋಟೊಕಾಲ್ ಅನುಸರಿಸಿ, ಗುಣವಾಗಬಹುದು.

# ಮಕ್ಕಳಿಗೆ ಸಿರಿಧಾನ್ಯ ನೀಡಬಹುದೇ?

9 ತಿಂಗಳ ಮಗುವಿನಿಂದ ನೂರಾರು ವರ್ಷದವರೆಗೆ ಎಲ್ಲರೂ ಸೇವಿಸಬಹುದು.

# ಸಂಧಿವಾತಕ್ಕೆ ಸೂಕ್ತ ಸಿರಿಧಾನ್ಯ ಯಾವುದು?

ನವಣೆ ಅಕ್ಕಿ ಉತ್ತಮವಾದದ್ದು. ವಾರದಲ್ಲಿ ಮೂರು ದಿನ, ಮಿಕ್ಕಿದ ದಿನಗಳಲ್ಲಿ ಒಂದೊಂದು ಸಿರಿಧಾನ್ಯ ಸೇವಿಸಿ. ಎಳ್ಳಿನ ಉಂಡೆ ಸೇವಿಸಿ.

# ಸಿರಿಧಾನ್ಯಗಳನ್ನು ರಾಸಾಯನಿಕದಿಂದ ಬೆಳೆದಾಗ ಆಗುವ ಅಪಾಯ ಏನು? ಮಿಲೆಟ್ ವರ್ಷದ ಲಾಭ ಹೇಗೆ ಪಡೆಯಬಹುದು?

ಕಾಪೋರೇಟ್ ಕಂಪನಿಗಳು ತಂತ್ರಜ್ಞಾನದ ಹೆಸರಿನಲ್ಲಿ ರೈತರ ಬೀಜದ ಹಕ್ಕನ್ನು ಕಸಿದುಕೊಂಡಿದ್ದಾರೆ. ಸರ್ಕಾರದಿಂದ ಫೋರ್ಟಿಫಿಕೇಷನ್ ಹೆಸರಿನಲ್ಲಿ ಸಾವಿರಾರು ಕೋಟಿ ರೂ. ವೆಚ್ಚ ಮಾಡುತ್ತಾರೆ. ಆದರೆ ಸಿರಿಧಾನ್ಯಕ್ಕೆ ಸಣ್ಣ ಸಂಸ್ಥೆ ಮಾಡಿರುತ್ತಾರೆ. ಮಿಲೆಟ್ ವರ್ಷ ಘೋಷಣೆ ಉತ್ತಮವಾದರೂ ಮತ್ತೆ ಬೀಜದ ಹಕ್ಕನ್ನು ಕಿತ್ತುಕೊಳ್ಳುವ ಸಂಚು ಇಲ್ಲೂ ಇರಬಹುದು. ಜೈವಿಕ ತಂತ್ರಜ್ಞಾನ ಬಳಸಿ, ಗೊಬ್ಬರ ಬಳಸಿ ಬೆಳೆಯುವ ಆಹಾರದಿಂದ ದೂರ ಸರಿಯಿರಿ ಎಂದು ರೈತರಿಗೆ ಕರೆ ನೀಡುತ್ತೇನೆ.

ಆಹಾರದ ವಿರುದ್ಧ ಅಪಪ್ರಚಾರ
ಶೇಂಗಾ ತಿಂದರೆ ಅಪ್ಲೋಟಾಕ್ಸಿನ್ ಬರುತ್ತದೆ ಎಂದು ವಿಜ್ಞಾನಿಗಳು ಆಪಾದನೆ ಮಾಡಿದರು. ಶೇಂಗಾ ಇಳುವರಿ ಬಂದಾಗ, ಕಟಾವು ಮಾಡಿದಾಗ ತೇವಾಂಶ ಇದ್ದರೆ, ಅದರಲ್ಲಿ ಫಂಗಸ್ ಬೆಳೆದರೆ ತೊಂದರೆ ಆಗುತ್ತದೆ. ಆದರೆ ಅದನ್ನು ನೈಪುಣ್ಯದಿಂದ ಬೆಳೆಯುವ ರೈತರು ನಮ್ಮಲ್ಲಿ ಈಗಲೂ ಇದ್ದಾರೆ. ಶೇಂಗಾದಿಂದ ಅನೇಕ ಉಪಯೋಗಗಳಿವೆ.

ಸಿರಿಧಾನ್ಯ ಎಂಬ ಹೆಸರು
ಎಲ್ಲರಿಗೂ ಆರೋಗ್ಯ ಸಿರಿ ಬೇಕು, ಕೋಟ್ಯಂತರ ರೂ. ಹಣ ಬೇಕಾಗಿಲ್ಲ. ಆರೋಗ್ಯವೇ ಸಿರಿ ಎಂಬ ಕಾರಣಕ್ಕೆ, ಈ ಐದು ಧಾನ್ಯಗಳಿಗೆ ಸಿರಿಧಾನ್ಯ ಎಂದು ಹೆಸರಿಟ್ಟೆ.

ಸೇಬಿಗಿಂತ ಸೀಬೆಹಣ್ಣೇ ಲೇಸು
ಚಳಿ ಇದ್ದ ಜಾಗದಲ್ಲಿ ಸೇಬನ್ನು ಬೆಳೆಯಲಾಗುತ್ತದೆ. ಅದರಲ್ಲಿ ಯಾವ ಪೌಷ್ಟಿಕಾಂಶವೂ ಇರುವುದಿಲ್ಲ. ಅದಕ್ಕಿಂತಲೂ ಸೀಬೆ ಹಣ್ಣು ಉತ್ತಮ. ವಿಟಮಿನ್ ಸಿ ಸೇರಿ ವಿವಿಧ ಪ್ರತಿಜನಕಗಳನ್ನು ಸೀಬೆ ಹಣ್ಣು ಉತ್ಪಾದನೆ ಮಾಡುವ ಕೆಲಸ ಮಾಡುತ್ತದೆ.

ವಿಜಯವಾಣಿಗೆ ಧನ್ಯವಾದಗಳು
ಸಿರಿಧಾನ್ಯಗಳನ್ನು ಮಾಧ್ಯಮಗಳು ಮತ್ತಷ್ಟು ಪ್ರಚಾರ ಮಾಡಬೇಕು ಎಂದ ಡಾ. ಖಾದರ್, ಈ ಕುರಿತು ವಿಜಯವಾಣಿಯ ಪರಿಶ್ರಮವನ್ನು ಶ್ಲಾಘಿಸಿದರು. ಸಿರಿಧಾನ್ಯದ ಕುರಿತು ಅನೇಕ ಬಾರಿ ಪ್ರಕಟಿಸಿದ್ದು, ಪತ್ರಿಕೆ ಕಾಳಜಿಗೆ ಅಭಿನಂದನೆಗಳು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net