ಗಾಂಧೀಜಿಗೆ ಊಟ ತಯಾರಿಸಿ, ಸ್ನಾನಕ್ಕೆ ನೀರು ಕಾಯಿಸಿ ಕೊಟ್ಟಿದ್ದೆ - ಶಾಂತಾಬಾಯಿ ವೆರ್ಣೇಕರ್

010203
Published on

ಬೆಳಗಾವಿ: ‘ನನಗೆ ಆಗ 11 ವರ್ಷ ವಯಸ್ಸು. ಆಗ ಸ್ವಾತಂತ್ರ್ಯ ಹೋರಾಟದ ಕಿಚ್ಚು ದೇಶಾದ್ಯಂತ ಹಬ್ಬಿತ್ತು. ಅದರ ಬಿಸಿ ನಮ್ಮೂರಿಗೂ ತಟ್ಟಿತ್ತು. ಉಪ್ಪಿನ ಸತ್ಯಾಗ್ರಹಕ್ಕೆ ಖುದ್ದು ಗಾಂಧೀಜಿ ಆಗಮಿಸಿದ್ದರು. ನಮ್ಮೂರಿಗೆ ಬಂದವರು ನಮ್ಮ ಮನೆಗೂ ಬಂದಿದ್ದರು. ಅವರ ಆಗಮನದಿಂದ ನಮ್ಮ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಆಗ ಗಾಂಧೀಜಿ ಅವರಿಗೆ ಅನ್ನ, ಸಾರು, ನಾನಾ ಬಗೆಯ ಪಲ್ಯ, ತಿನಿಸುಗಳನ್ನು ನನ್ನ ಕೈಯಾರೆ ಮಾಡಿಕೊಟ್ಟಿದ್ದೆ. ಅವರು ಪ್ರೀತಿಯಿಂದ ನಮ್ಮ ಆತಿಥ್ಯ ಸ್ವೀಕರಿಸಿದ್ದರು ಎಂದು ಕಾರ್ಯಕ್ರಮಕ್ಕೆ ವ್ಹೀಲ್‌ಚೇರ್‌ನಲ್ಲಿ ಬಂದಿದ್ದ ಮೂಲತಃ ಅಂಕೋಲಾದ ಗದಗ ಹಾಲಿ ನಿವಾಸಿ 105 ವರ್ಷದ ಶಾಂತಾಬಾಯಿ ಸುಬ್ಬರಾವ್ ವೆರ್ಣೇಕರ್ ಗಾಂಧೀಜಿ ಅವರ ಒಡನಾಟ ಸ್ಮರಿಸಿದರು.

ಮೂರು ದಿನ ನಮ್ಮ ಮನೆಯಲ್ಲೇ ವಾಸ್ತವ್ಯ ಹೂಡಿದ್ದ ಗಾಂಧೀಜಿ ಅವರಿಗೆ ಊಟೋಪಚಾರದ ಜತೆಗೆ ಸ್ನಾನಕ್ಕೆ ಬಿಸಿನೀರು ಕಾಯಿಸಿ ಕೊಟ್ಟಿದ್ದೆ. ಈಗ ಬೆಳಗಾವಿಯಲ್ಲಿ ಗಾಂಧೀಜಿ ಪುತ್ಥಳಿ ಅನಾವರಣಕ್ಕೆ ನನಗೆ ಆಹ್ವಾನಿಸಿದ್ದಕ್ಕೆ ಬಹಳ ಸಂತೋಷವಾಗಿದೆ ಎಂದರು.

ಉದಯ ವೆರ್ಣೇಕರ್ ಮಾತನಾಡಿ, ನಮ್ಮ ತಾಯಿಗೆ ನಾನು 10ನೇ ಮತ್ತು ಕೊನೆಯ ಮಗ. ನಮ್ಮ ತಾಯಿ ಗಾಂಧೀಜಿ ಅವರಿಗೆ ಅಡುಗೆ ಮಾಡಿ ಕೊಟ್ಟಿದ್ದರು. ಇದು ನಮ್ಮ ಕುಟುಂಬಕ್ಕೆ ದೊಡ್ಡ ಹೆಮ್ಮೆ. ನಮ್ಮ ತಾಯಿ ಅವರ ಚಿಕ್ಕಮ್ಮನ ಇಬ್ಬರು ಮಕ್ಕಳು ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನಗೈದಿದ್ದರು. ಈ ವಿಚಾರವನ್ನು ನಮ್ಮ ತಾಯಿಯವರು ಈಗಲೂ ನೆನೆದು ಕಣ್ಣೀರು ಹಾಕುತ್ತಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net