

ರಾಣೆಬೆನ್ನೂರ: ರೈತರಿಗೆ ಕಡಿಮೆ ಬೆಲೆಯಲ್ಲಿ ಕೃಷಿ ಯಂತ್ರೋಪಕರಣ ವಿತರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದ ಕೃಷಿ ಯಂತ್ರಧಾರೆ ಯೋಜನೆಯಲ್ಲಿ ಅಕ್ರಮ ನಡೆದಿದ್ದು, ರೈತರಿಗೆ ಯಂತ್ರ ವಿತರಣೆ ಮಾಡದೆ ಹಾಗೂ ಸರ್ಕಾರಕ್ಕೆ 69.93 ಲಕ್ಷ ರೂ. ವಂಚಿಸಿದ ಆರೋಪದಡಿ ಇಬ್ಬರು ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಚಿತ್ರದುರ್ಗದ ಕೆಳಗೋಟೆ ಇಂಡಸ್ಟ್ರೀಯಲ್ ಏರಿಯಾದ ಅಗ್ರಿ ಬ್ಯುಸಿನೆಸ್ ಸೆಂಟರ್ ಫಾರ್ ಡೆವಲೆಪಮೆಂಟ್‌ನ ರಮೇಶ ಕೆ.ಎಂ. ಹಾಗೂ ವರ್ಷಾ ಅಸೋಸಿಯೇಟ್ಸ್‌ನ ಎಸ್.ವಿ. ರಾಜು ಎಂಬುವರ ವಿರುದ್ಧ ಇಲ್ಲಿಯ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಇಲ್ಲಿಯ ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ದೂರು ದಾಖಲಿಸಿದ್ದಾರೆ. ಇಬ್ಬರು ಆರೋಪಿತರು ಕೃಷಿ ಇಲಾಖೆ ಹೋಬಳಿ ಮಟ್ಟದಲ್ಲಿ ಕೃಷಿ ಯಂತ್ರಗಳನ್ನು ಸ್ಥಾಪಿಸಲು ಕರೆದಿದ್ದ ಟೆಂಡರ್‌ನಲ್ಲಿ ಭಾಗವಹಿಸಿ ತಾಲೂಕಿನ ಮೇಡ್ಲೇರಿ ಹೋಬಳಿ ಮಟ್ಟದಲ್ಲಿ ಕೃಷಿ ಯಂತ್ರಧಾರೆ ಕೇಂದ್ರ ಸ್ಥಾಪಿಸಲು 2020 ಆಗಸ್ಟ್ 5ರಂದು ಒಡಂಬಡಿಕೆ ಮಾಡಿಕೊಂಡು ಸರ್ಕಾರದಿಂದ 69.93 ಲಕ್ಷ ರೂ. ಸಹಾಯಧನ ಪಡೆದುಕೊಂಡಿದ್ದರು.
ಆದರೆ, ಮೇಡ್ಲೇರಿ ಹೋಬಳಿ ವ್ಯಾಪ್ತಿಯಲ್ಲಿ ಉಪಕರಣಗಳ ಕೇಂದ್ರವನ್ನು ಸ್ಥಾಪಿಸಿ ರೈತರಿಗೆ ಬಾಡಿಗೆ ನೀಡದೆ ಲೋಪ ಎಸಗಿದ್ದಾರೆ. ಅಲ್ಲದೆ ಕೃಷಿ ಇಲಾಖೆಗೆ ವಂಚನೆ ಮಾಡುವ ಉದ್ದೇಶದಿಂದ ಇಲಾಖೆಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಯಂತ್ರೋಪಕರಣಗಳನ್ನು ನಿಯೋಜನೆ ಚಾಲನಾ ಸಮಿತಿ ಅನುಮತಿ ಪಡೆಯದೆ ಬೇರಡೆ ಸಾಗಾಟ ಮಾಡಿದ್ದಾರೆ. ಸರ್ಕಾರಕ್ಕೆ 69.93 ಲಕ್ಷ ರೂ. ವಂಚಿಸಿ ದ್ರೋಹ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.