

ಕಂಪ್ಲಿ: ತಾಲೂಕಿನ ಸುಗ್ಗೇನಹಳ್ಳಿಯ ಆರಾಧ್ಯದೈವ ದುರ್ಗಾದೇವಿ ದೇವಸ್ಥಾನದಲ್ಲಿ ವಿಜಯದಶಮಿ ಪ್ರಯುಕ್ತ ಶನಿವಾರ ತಡರಾತ್ರಿ ದುರ್ಗಾದೇವಿ ಗಂಗೆಸ್ಥಳ ಪಲ್ಲಕ್ಕಿ ಉತ್ಸವ, ಅಗ್ನಿಕೊಂಡ ಹಾಯುವ, ತನುಗೊಡ ತರುವ, ಪಾಸೇವು(ಹೇಳಿಕೆ)ನೀಡುವ ಕಾರ್ಯಕ್ರಮ ಜರುಗಿದವು.
ಭಾನುವಾರ ನಸುಕಿನ ಜಾವ ಶ್ರೀದುರ್ಗಾದೇವಿ ದೇವಸ್ಥಾನದ ಅರ್ಚಕ ಎಚ್.ಪಿ.ವಿರೂಪಾಕ್ಷಿ, ಕುದಿಯುವ ಅನ್ನವನ್ನು ಕುಂಭದಿಂದ ಹೊರತೆಗೆಯುವಾಗ ನಾನು ನಾನು ಎಂಬುದು ನಂದಾ ದೀಪ ಉರಿದು ಹೋಯಿತು ಎನ್ನುವ ಪಾಸೇವು ನುಡಿದಿದ್ದು, ನಾನೆಂದು ಅಹಂನಿಂದ ಮೆರೆದವರೆಲ್ಲವೂ ಮೂಲೆಗುಂಪಾಗುವರು ಎಂದು ಗ್ರಾಮಸ್ಥರು ಅರ್ಥೈಸಿದರು. ಅಗ್ನಿಕೊಂಡ ಹಾಯುವ ಮುನ್ನ ನಾಲ್ಕು ಕಾರ್ಣಿಕ ನುಡಿದಿದ್ದು ರೈತರು, ಗ್ರಾಮಸ್ಥರು ಮಳೆ, ಬೆಳೆ, ದರ ಬಗ್ಗೆ ವ್ಯಾಖ್ಯಾನಿಸಿದರು.
ಬಹುಪರಾಕ್ ಬಹು ಎಚ್ಚರ ಮೊದಲ ಪಾಸೇವು ಆಗಿದ್ದು ಎಲ್ಲರೂ ಎಚ್ಚರದಿಂದ ಜೀವನ ಸಾಗಿಸಬೇಕು. ಎರಡನೆಯದು ‘ಪಾರ್ವತಿ ಪರಮೇಶ್ವರ ಸಮುದ್ರ ದಂಡೆಯಲಿ ಚೆಲ್ಲಾಟ ಆಡಿದರು’ ಎಂಬುದಕ್ಕೆ ಈ ಬಾರಿ ಸಂತುಷ್ಟ ಮಳೆ ಆಗುವುದೆಂದು, ಮೂರನೆಯದು ಕೆಂಪು ಕುದುರೆ 14 ಹೆಜ್ಜೆ ಮುಂದಕ್ಕೆ ಇಟ್ಟು 15ನೇ ಹೆಜ್ಜೆಗೆ ಗಗನಕ್ಕೆ ಹಾರಿತು ಎನ್ನುವುದಕ್ಕೆ ಕೆಂಪು ಮೆಣಸಿನಕಾಯಿ ಸೇರಿ ಕೆಂಪು ಬಣ್ಣದ ಧಾನ್ಯಗಳ ದರ ಗಗನಕ್ಕೇರುತ್ತದೆಂದು ಹಾಗೂ ನಾಲ್ಕನೇ ಹೇಳಿಕೆ 3-6 ಆಗುತ್ತದೆ ಅಂದರೆ ಎಲ್ಲ ಕಾಳುಕಡಿ, ದಿನಸಿ ಸಾಮಗ್ರಿ ಬೆಲೆ ಗಗನಕ್ಕೇರುವವು ಎಂದು ಗ್ರಾಮಸ್ಥರಲ್ಲಿ ಚರ್ಚೆಯಾಗುತ್ತಿದೆ. ಸುತ್ತಲಿನ ಗ್ರಾಮಗಳ ಭಕ್ತರು ಗಂಗೆಸ್ಥಳ ಉತ್ಸವ, ಅಗ್ನಿಕುಂಡ ಹಾಯುವ ಕಾರ್ಯಕ್ರಮ ವೀಕ್ಷಿಸಿದರು.